ಸಾವಯವ ಕೃಷಿ ತಾಲೂಕು ಕುರಿತು ಪ್ರಚಾರ

ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಎಸ್.ದಯಾನಂದ್, ಕೆ.ಟಿ.ಗೋವಿಂದೇಗೌಡ, ವೈ.ಪಿ.ಮಂಜು ಇತರರು ಇದ್ದರು.
ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಎಸ್.ದಯಾನಂದ್, ಕೆ.ಟಿ.ಗೋವಿಂದೇಗೌಡ, ವೈ.ಪಿ.ಮಂಜು ಇತರರು ಇದ್ದರು.
Published on
ಪಾಂಡವಪುರ: ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ಕೃಷಿ ತಾಲೂಕು ಎಂದು ಘೋಷಣೆ ಮಾಡಿದ್ದು, ಈ ಬಗ್ಗೆ ಕೃಷಿ ಅಧಿಕಾರಿಗಳು ಎಲ್ಲೆಡೆ ಪ್ರಚಾರ ಮಾಡಿ ರೈತರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಚಂದ್ರೆ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಸೋಮವಾರ ಪೂಜೆ ನರೆವೇರಿಸಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ನಮ್ಮ ಆರೋಗ್ಯ ಹದಗೆಡುವ ಜತೆಗೆ ಭೂಮಿಯ ಫಲವತ್ತತೆಯೂ ಹಾಳಾಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನನ್ನು ಸಾವಯವ ಕೃಷಿಗೆ ಒಗ್ಗಿಸಿಕೊಳ್ಳಬೇಕು. ಪ್ರಾರಂಭದಲ್ಲಿ ನಷ್ಟವಾದರೂ ನಂತರದಲ್ಲಿ ಲಾಭ ಮಾಡಬಹುದು. ಸಾವಯವ ಬೆಳೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಈಗಾಗಲೇ ಅನೇಕ ಕಂಪನಿಗಳು ಸಾವಯವ ಬೆಳೆ ಖರೀದಿಸುವುದಕ್ಕೆ ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ವೈ.ಪಿ.ಮಂಜು ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಅವರ ಕಾಲದಿಂದಲೂ ಚಂದ್ರೆ ಗ್ರಾಮದ ಜನರು ರೈತ ಸಂಘವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ರೈತರ ಬಗ್ಗೆ ಅಪಾರ ಕಾಳಜಿ ಇರುವ ದರ್ಶನ್ ಅವರಿಗೂ ಕಳೆದ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ಈ ಗ್ರಾಮದಿಂದ ವ್ಯಕ್ತವಾಗಿದೆ. ಮುಂದಿನ ಚುನಾವಣೆಯಲ್ಲೂ ಇದೇ ರೀತಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ ಮಾತನಾಡಿ, ನಾಗರಿಕ ಸಮಾಜದಲ್ಲಿ ಒಂದು ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಚರಂಡಿ ಹಾಗೂ ಶಾಲೆ ಅಗತ್ಯವಾಗಿರುತ್ತದೆ. ಇದನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ತಡೆಗೋಡೆ ನಿರ್ಮಾಣಕ್ಕೆ ಮನವಿ : ಚಂದ್ರೆ ಗ್ರಾಮದಲ್ಲಿರುವ ಕೆರೆ ಏರಿ ಕಿರಿದಾಗಿದ್ದು, ಏಕ ಕಾಲಕ್ಕೆ ಎರಡು ವಾಹನಗಳು ಸಂಚರಿಸುವುದು ಕಷ್ಟವಾಗಿದೆ. ಕೆರೆ ಎರಡು ಬದಿಯಲ್ಲೂ ತಡೆಗೋಡೆ ಇಲ್ಲದ ಕಾರಣ ಭಯದಿಂದಲೇ ಸಂಚರಿಸುವಂತಾಗಿದೆ. ಹೀಗಾಗಿ ಕೆರೆ ಏರಿಗೆ ತಡೆಗೋಡೆ ನಿರ್ಮಿಸಿಕೊಡಬೇಕು ಹಾಗೂ ಶುದ್ಧ ಕುಡಿಯವ ನೀರು, ಸೋಪಾನಕಟ್ಟೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಗ್ರಾಮಸ್ಥರು ಶಾಸಕ ದರ್ಶನ್ ಅವರಲ್ಲಿ ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಇಂಜಿನಿಯರ್ ರೂಪಾ, ಸೋಮಶೇಖರ್, ವೆಂಕಟೇಶ್, ಚಿಕ್ಕೇಗೌಡ, ಸ್ವಾಮಿಗೌಡ, ಸುಶೀಲಮ್ಮ, ಲಕ್ಷ್ಮೇಗೌಡ, ಬಲರಾಮು, ಸಿದ್ದೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net