ಗುರಿ ನಿಗದಿಪಡಿಸಿಕೊಂಡು ತೆರಿಗೆ ವಸೂಲಾತಿ ಮಾಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ
  • ತೆರಿಗೆ ವಸೂಲಾತಿಗೆ ಸೂಚನೆ
  • ಇಂದಿರಾ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಆಹಾರವಿರುವಂತೆ ನೋಡಿಕೊಳ್ಳಿ
ಮಂಡ್ಯ: ನಗರಾಭಿವೃದ್ಧಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಆಸ್ತಿ ತೆರಿಗೆ, ನೀರಿನ ತೆರಿಗೆ, ಅಂಗಡಿ ಮಳಿಗೆಗಳ ಬಾಡಿಗೆ, ಜಾಹೀರಾತು ತೆರಿಗೆ, ಉದ್ದಿಮೆ ಪರವಾನಗಿ ಶುಲ್ಕ, ನೆಲ ಬಾಡಿಗೆ, ವಾಹನ ನಿಲ್ದಾಣ ಶುಲ್ಕ, ಮಾರುಕಟ್ಟೆ, ಕಸಾಯಿ ಖಾನೆ ಹಾಗೂ ಮೊಬೈಲ್ ಟವರ್ ಬಾಡಿಗೆ ವಸೂಲಾತಿಯನ್ನು ಗುರಿ ನಿಗದಿ ಮಾಡಿಕೊಂಡು ಕಟ್ಟುನಿಟ್ಟಾಗಿ ವಸೂಲಾತಿಗೆ ಕ್ರಮ ಕೈಗೊಳ್ಳಬೇಕು. ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದ ಆಸ್ತಿಗಳ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ ಎನ್‌ಜಿಟಿ ಕಾಮಗಾರಿಗಳು, ಸ್ವಚ್ಛ ಭಾರತ್ ಅಭಿಯಾನ, ಅಮೃತ್ ಯೋಜನೆ, ಪ್ರಧಾನ ಮಂತ್ರಿ ಆವಾಸ ಯೋಜನೆ, 15ನೇ ಹಣಕಾಸು ಆಯೋಗ ಯೋಜನೆ, ನಲ್ಮ್ ಯೋಜನೆ ಹಾಗೂ ಪಿಎಂ ಸ್ವನಿಧಿ ಯೋಜನೆಗಳ ಭೌತಿಕ ಹಾಗೂ ಹಣಕಾಸು ಪ್ರಗತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ರಾಜ್ಯ ಸರ್ಕಾರದ ಯೋಜನೆಗಳಾದ ನಗರೋತ್ಥಾನ, ಪಿಕೆಜಿಬಿ ಯೋಜನೆ, ಎಸ್‌ಎಫ್‌ಸಿ ಮುಕ್ತ ನಿಧಿ, ಬಂಡವಾಳ ಸೃಜನೆ, ವಿಶೇಷ ಅನುದಾನ, ಎಸ್‌ಎಫ್‌ಸಿ ಕುಡಿಯುವ ನೀರು ಯೋಜನೆಗಳು, ಎಸ್‌ಸಿಎಸ್‌ಪಿ, ಟಿಎಸ್‌ಪಿ, ಟೆಲ್ಟ್ ಯೋಜನೆ, ಸಿಸಿಎಂಎಸ್, ಎಲ್‌ಇಡಿ ಬೀದಿ ದೀಪ ಅನುಷ್ಠಾನ ಯೋಜನೆ ಹಾಗೂ ವಸತಿ ಯೋಜನೆಗಳು(ವಾಜಪೇಯಿ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ನಿವೇಶನ ಯೋಜನೆ) ಪ್ರಗತಿಯನ್ನು ಪರಿಶೀಲಿಸಿ, ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಪ್ರಗತಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ನಿಗದಿತ ಸಮಯಕ್ಕೆ ಉಪಾಹಾರ-ಮಧ್ಯಾಹ್ನ-ರಾತ್ರಿ ಊಟ ವಿತರಣೆ ಖಚಿತಪಡಿಸಿಕೊಳ್ಳಬೇಕು. ಲಾಭಾರ್ಥಿಗಳಿಗೆ ತೊಂದರೆ ಆಗದಂತೆ ನಿರಂತರ ಸರಬರಾಜು, ಸಿಬ್ಬಂದಿ ಹಾಜರಾತಿ, ದೂರುಗಳ ತ್ವರಿತ ಪರಿಹಾರ ಹಾಗೂ ನಿಯಮಿತ ಪರಿಶೀಲನೆ ನಡೆಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸಿ ಪ್ರಗತಿ ವರದಿ ಸಲ್ಲಿಸಿ. ಇ-ಖಾತಾ ಅಭಿಯಾನ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಶ್ರೀ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net