ಮಹಾವೀರರ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಹೇಳಿಕೆ

ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಂಡ್ಯ ನಗರದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು.
ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಮಂಡ್ಯ ನಗರದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ಮೆರವಣಿಗೆ
  • ಅನಂತನಾಥಸ್ವಾಮಿ(ದಿಗಂಬರ ಜೈನ ಸಮಾಜ) ದೇವಾಲಯದ ವತಿಯಿಂದ ಆಯೋಜನೆ
ಮಂಡ್ಯ: ಭಗವಾನ್ ಮಹಾವೀರರು ಬೋಧಿಸಿದ ಕರುಣೆ ಮತ್ತು ವಿಶ್ವಬಂಧುತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಅಜ್ಞಾನದ ಕತ್ತಲೆ ಸರಿದು ಜ್ಞಾನದ ಬೆಳಕು ಎಲ್ಲೆಡೆ ಪಸರಿಸುವಂತಾಗಲಿ ಎಂದು ಕಸಾಪ ಮಾಜಿ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ತಿಳಿಸಿದರು.
ಮಹಾವೀರ ಜಯಂತಿ ಅಂಗವಾಗಿ ನಗರದ ಶ್ರೀ ಅನಂತನಾಥಸ್ವಾಮಿ(ದಿಗಂಬರ ಜೈನ ಸಮಾಜ) ದೇವಾಲಯದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಜೈನ ಧರ್ಮದ ಕೊನೆಯ ಆಧ್ಯಾತ್ಮಿಕ ಗುರುವಿನ ಸ್ಮರಣಾರ್ಥವಾಗಿ ವಿಶ್ವದಾದ್ಯಂತ ಜೈನ ಸಮುದಾಯವು ಈ ದಿನವನ್ನು ಮಹಾವೀರ ಜಯಂತಿ ಆಚರಿಸುತ್ತದೆ. ಜೈನರಿಗೆ ಮಹಾವೀರ ಜಯಂತಿ ಅತ್ಯಂತ ಶುಭ ದಿನವಾಗಿದೆ ಎಂದರು.
ಒಬ್ಬ ಸಂರಕ್ಷಕ, ಶ್ರೇಷ್ಟ ಪ್ರವಾದಿ, ಸಮಾಜ ಸುಧಾಕರ, ಸಂತ ಮತ್ತು ಭೂಮಿಯ ಮೇಲಿನ ದೇವರು, ದೇವಿಕ ಚೈತನ್ಯವನ್ನು ವಿವರಿಸಲು ವಿಭಿನ್ನ ಮಾರ್ಗಗಳನ್ನು ಮಹಾವೀರರು ಅನುಸರಿಸಿದವರು. ವಿಶ್ವದಲ್ಲಿ ಶಾಂತಿ ಮತ್ತು ಸಂತೋಷವನ್ನು ತರಲು, ಸದಾಚಾರದ ಹಾದಿಯಲ್ಲಿ ನಡೆಯಲು ಭಗವಾನ್ ಮಹಾವೀರರು ಪ್ರತಿಯೊಬ್ಬರನ್ನೂ ಪ್ರೇರೇಪಿಸಿದರು. ಅವರ ದೈವಿಕ ಬೋಧನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಗವಾನ್ ಮಹಾವೀರರು ಕ್ರಿ.ಪೂ 599 ರಲ್ಲಿ ಇಂದಿನ ಭಾರತದ ಬಿಹಾರದಲ್ಲಿ ಜನಿಸಿದರು. ಅವರು 30ನೇ ವಯಸ್ಸಿನಲ್ಲಿ ತಮ್ಮ ರಾಜ ಜೀವನವನ್ನು ತೊರೆದು ತಪಸ್ಸು ಮತ್ತು ಧ್ಯಾನದ ಜೀವನವನ್ನು ನಡೆಸಿದರು. ಮುಂದಿನ 12 ವರ್ಷಗಳನ್ನು ಅವರು ಕಠಿಣ ಪರಿಶ್ರಮ ಮತ್ತು ವಿವಿಧ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದರು ಎಂದು ಹೇಳಿದರು.
ಭಗವಾನ್ ಮಹಾವೀರರ ಬೋಧನೆಗಳು ಪ್ರಪಂಚದ ಮೇಲೆ ಆಳವಾದ ಪ್ರಭಾವ ಬೀರಿವೆ ಮತ್ತು ಅವರ ತತ್ವಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ. ಅವರು ಅಹಿಂಸೆ, ಸತ್ಯತೆ, ಬ್ರಹ್ಮಚರ್ಯ ಮತ್ತು ಸ್ವಾಧೀನವಿಲ್ಲದಿರುವಿಕೆಯ ತತ್ವಗಳನ್ನು ಕಲಿಸಿದರು. ಎಲ್ಲ ಜೀವಿಗಳು ಸಮಾನರು ಮತ್ತು ಅವುಗಳನ್ನು ಗೌರವ ಮತ್ತು ದಯೆಯಿಂದ ನಡೆಸಿಕೊಳ್ಳಬೇಕು ಎಂದು ಭಗವಾನ್ ಮಹಾವೀರರು ನಂಬಿದ್ದರು. ಸರಳ ಮತ್ತು ಆಧ್ಯಾತ್ಮಿಕ ಜೀವನವನ್ನು ನಡೆಸುವ ಮತ್ತು ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ಅನುಸರಿಸುವ ಮಹತ್ವವನ್ನು ತಿಳಿಸಿದ್ದಾರೆ ಎಂದು ವಿವರಿಸಿದರು.
ಜೈನ ಸಮಾಜದ ಮುಖಂಡರಾದ ಎಂ.ಬಿ.ಶ್ರೀಧರ್, ಮಾಜಿ ಅಧ್ಯಕ್ಷ ಎಂ.ಎಲ್.ಶಾಂತಿಪ್ರಸಾದ್, ಉಪಾಧ್ಯಕ್ಷ ವಿನಯ್‌ಕುಮಾರ್, ಖಜಾಂಚಿ ಮಹೇಂದ್ರಬಾಬು, ಡಾ.ಅನಂತರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net