ಮಾದರಿ ಮಂಡ್ಯ ಕಟ್ಟುವ ಕನಸಿದೆ: ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ

ರಂಗೋಲಿ ಸ್ಪರ್ಧೆ ವಿಜೇತರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಬಹುಮಾನ ವಿತರಿಸಿದರು.
ರಂಗೋಲಿ ಸ್ಪರ್ಧೆ ವಿಜೇತರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಬಹುಮಾನ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎರಡು ದಿನದ ಬೂದನೂರು ಉತ್ಸವ ಸಂಪನ್ನ
  • ವಿಶೇಷ ಕಾರ್ಯಕ್ರಮ ಕಣ್ತುಂಬಿಕೊಂಡ ಸಹಸ್ರಾರೂ ಜನ
ಮಂಡ್ಯ: ದೇವರ ಶಕ್ತಿಯಿಂದ ಯಾವುದೇ ಅಡೆತಡೆಯಿಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆಯ ನಡುವೆ ಬೂದನೂರು ಉತ್ಸವ ಯಶಸ್ಸನ್ನು ಕಂಡಿದ್ದು ನಿಜಕ್ಕೂ ಸಂತಸ ಉಂಟು ಮಾಡಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೆರಗೋಡು ಪಂಚಲಿಂಗೇಶ್ವರ ದೇವಾಲಯವನ್ನು ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಬಸರಾಳು ಹೋಬಳಿಯ ಅಭಿವೃದ್ಧಿಗೆ 1200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಕಾವೇರಿ ನದಿಯಿಂದ ನೀರಾವರಿ ಕಲ್ಪಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಇಷ್ಟು ವರ್ಷಗಳಲ್ಲಿ ಮಂಡ್ಯ ದೊಡ್ಡ ಹಳ್ಳಿಯಾಗಿತ್ತು, ಆರು ತಿಂಗಳಲ್ಲಿ ಮಂಡ್ಯ ನಗರವನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದು, ಮಂಡ್ಯ ನಗರಕ್ಕೆ ರಿಂಗ್ ರೋಡ್ ನಿರ್ಮಾಣ ಮಾಡಲಾಗುವುದು. ಕ್ರೀಡಾಪಟುಗಳ ಆಶಯದಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಮತ್ತು ಜೆ.ಸಿ.ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಂಡ್ಯ ನಗರದ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರೈತರ ನೀರಾವರಿ ಸಮಸ್ಯೆ ನಿವಾರಿಸಲು 230 ಕೋಟಿ ರೂ. ಅನುದಾನದಲ್ಲಿ ಕಾಲುವೆಗಳ ಅಭಿವೃದ್ಧಿಪಡಿಸುತ್ತಿದ್ದು, ನನ್ನ ಆಡಳಿತಾವಧಿಯಲ್ಲಿ ಮಾದರಿ ಮಂಡ್ಯ ಕಟ್ಟುವ ಕನಸಿದೆ ಎಂದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಹುಡುಗ ಐಟಿ-ಬಿಟಿಯಲ್ಲಿ ಕೆಲಸ ಮಾಡುತ್ತಾರೆ, ವಿದೇಶದಲ್ಲಿದ್ದಾನೆ ಎಂದು ಹೆಣ್ಣು ಕೊಡಬೇಡಿ. ಎಐ ಬಂದಿದೆ ಯಾವಾಗ ಕೆಲಸದಿಂದ ತೆಗೆಯುತ್ತಾರೆ ಅಂತ ಗೊತ್ತಿಲ್ಲ. ಹಾಗಾಗಿ ಇಲ್ಲೇ ಇರುವ ರೈತರ ಮಕ್ಕಳಿಗೆ ನಿಮ್ಮ ಹೆಣ್ಣು ಮಕ್ಕಳನ್ನು ಕೊಡಿ, ನಿಮ್ಮ ಕಷ್ಟ ಕಾಲದಲ್ಲಿ ಆಗುತ್ತಾರೆ ಹೇಳಿದರು.
ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಾಲಕ್ಕೆ ಜೀವ ಹೆದರಬಾರದು, ಹೆದರ ಬೇಕಿರುವುದು ಸಾಲ ಕೊಟ್ಟಿರುವ ಬ್ಯಾಂಕ್ ಮ್ಯಾನೇಜರ್. ಸಾಲ ಕಟ್ಟದಿದ್ದರೆ ಮನೆ ಹತ್ತಿರ ಬಂದು ಕೇಳುತ್ತಾರೆ. ಮರ್ಯಾದೆ ಹೋಯಿತು ಎಂದು ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು.
ಯುವಕರಿಗೆ ಫಿಲಾಸಫಿಕಲ್ ರೀತಿ ಹೇಳಿದರೆ ಕೇಳಲ್ಲ. ಅವರ ದಾರಿಯಲ್ಲೇ ಹೋಗಿ ಬುದ್ಧಿ ಹೇಳಬೇಕು. ಉಚಿತವಾಗಿ ಸಿಗುವ ಕನಸನ್ನು ದೊಡ್ಡದಾಗಿ ಕಾಣಿ. ನಿಮ್ಮ ಯಶಸ್ಸಿನ ಹಿಂದೆ ತಾಯಿ ಇರುತ್ತಾರೆ. ತಾಯಿ ಜತೆಗೆ ಇರುವುದೇ ತಂದೆ ಎಂದು ಅವರು, ಮಕ್ಕಳ ಭವಿಷ್ಯದ ಜತೆಗೆ ಹಣವನ್ನು ಉಳಿತಾಯ ಮಾಡಿ. ಅವರಿಗೆ ಮಕ್ಕಳಾದ ಬಳಿಕ ನಿಮಗಿಂತ ಅವರ ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಹಾಗಾಗಿ ಮಕ್ಕಳ ಭವಿಷ್ಯದ ಜತೆಗೆ ಹಣ ಉಳಿಸಿ ಇಡಬೇಕು. ಮುಂದೆ ಅನಾರೋಗ್ಯ ಎದುರಾದಾಗ ಹಣ ಬೇಕಾಗುತ್ತದೆ. ಮಧ್ಯಮ ವರ್ಗದ ಯುವಕ, ಯುವತಿಯರು ಧೈರ್ಯದಿಂದ ಇರಬೇಕು. ಬೀದಿಯಲ್ಲಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net