ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ
ಮಂಡ್ಯ: ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ, ನಿಂಗಮ್ಮ ದೊಡ್ಡಿತಿಮ್ಮೇಗೌಡ ಕೃಷಿಕ ಪ್ರಶಸ್ತಿ ಹಾಗೂ ಎಂ.ಆರ್.ಶಶಿಕಲಾ ಟಿ.ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭವನ್ನು ಮೇ 9ರಂದು ಸಂಜೆ 4 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ತಿಳಿಸಿದರು
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿರುವ ಸಮಾರಂಭವನ್ನು ಬೆಂಗಳೂರಿನ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ.ವೆಂಕಟಪ್ಪ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಠಾನದ ಅಧ್ಯಕ್ಷ ಎ.ಸಿ.ರಮೇಶ್ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಡಾ.ಕೆ.ಜ್ಯೋತಿ ಹಾಗೂ ಪ್ರಗತಿಪರ ಕೃಷಿ ಪ್ರಶಸ್ತಿ ಪುರಸ್ಕೃತೆ ದೇವರಹಳ್ಳಿಯ ಎಸ್.ಬಿ.ಸುವರ್ಣ ಅವರಿಗೆ ತಲಾ 25 ಸಾವಿರ ರೂ ನಗದಿನ ತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತೆಯೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ನಾಗಮಂಗಲದ ಕರಡಹಳ್ಳಿಯ ಧನಂಜಯ ರಾಮಚಂದ್ರು, ಕೆ.ಆರ್‌ಪೇಟೆ ಅಂಬಿಗರಹಳ್ಳಿಯ ಮುತ್ತೇಶ್‌ಗೌಡ ಅವರನ್ನು ಜಿಲ್ಲಾಧಿಕಾರಿ ಡಾ.ಕುಮಾರ ಸನ್ಮಾನಿಸುವರು ಎಂದು ಹೇಳಿದರು.
ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಾದ ಮಂಗಲ ಸ.ಪ.ಪೂ.ಕಾಲೇಜಿನ ಎಲ್.ಎನ್.ಮಹೇಂದ್ರ ಮತ್ತು ಸರ್ಕಾರಿ ಪ್ರೌಢಶಾಲೆಯ ಪರೀಕ್ಷಿತಾಗೆ ತಲಾ 5000 ರೂ ನಗದಿನೊಂದಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಕಾವೇರಿ ನೀರಾವರಿ ನಿಗಮದ ವಿಶ್ರಾಂತ ವ್ಯವಸ್ಥಾಪಕ ನಿರ್ದೇಶಕ ಟಿ.ತಿಮ್ಮೇಗೌಡ ಉಪಸ್ಥಿತರಿರುವರು. ಮಧ್ಯಾಹ್ನ 3ಗಂಟೆಯಿಂದ ಜಿಲ್ಲೆಯ ಕಲಾವಿದರಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಟ್ರಸ್ಟ್ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಜಂಟಿ ಕಾರ್ಯದರ್ಶಿ ಎಚ್.ಆರ್.ಕನ್ನಿಕಾ, ಖಜಾಂಚಿ ಶಂಕರೇಗೌಡ, ಟ್ರಸ್ಟಿ ಡಿ.ಎಸ್.ದೇವರಾಜು ಇದ್ದರು.