ಮಾ.22ರಂದು ಪ್ರಬಂಧ ಸ್ಪರ್ಧೆ ಆಯೋಜನೆ: ದಲಿತ ಸಂಘರ್ಷ ಸಮಿತಿ(ಬಣ ರಹಿತ) ಸಂಚಾಲಕ ಉಮಾ ಮಹದೇವು ಮಾಹಿತಿ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಉಮಾ ಮಹದೇವು ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಉಮಾ ಮಹದೇವು ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ಆಯೋಜನೆ
  • 75 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ
ಮಂಡ್ಯ: ದಲಿತ ಸಂಘರ್ಷ ಸಮಿತಿ(ಬಣ ರಹಿತ) ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಅಂಬೇಡ್ಕರ್ ಬದುಕು, ಸಾಧನೆ ಹಾಗೂ ದೇಶದ ಭವಿಷ್ಯದ ಬಗ್ಗೆ ಅವರ ಚಿಂತನೆಗಳು ಹಾಗೂ ಭಾರತ ಸಂವಿಧಾನದಿಂದ ನಾವು ಕಲಿಯಬೇಕಿರುವುದು ಏನನ್ನು? ವಿಷಯ ಕುರಿತು ಮಾ.22ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಉಮಾ ಮಹದೇವು ತಿಳಿಸಿದರು.
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಬಾರಿಯು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. 40 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವರ್ಷ 75 ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಕಾಲೇಜು ಶಿಕ್ಷಕರ ಇಲಾಖೆಯ ಆಯುಕ್ತರು, ವಿವಿಯ ಕುಲಸಚಿವರ ಗಮನಕ್ಕೂ ತರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಅರ್ಹತಾ ಪರೀಕ್ಷೆ ಎದುರಿಸಬೇಕಾಗುವುದು. ಆ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮಾ.9ಅಂತಿಮ ದಿನವಾಗಿದೆ. ಮಾ.9ರಂದು ಆಯಾ ಕಾಲೇಜಿನಲ್ಲಿ ಸಂವಿಧಾನದ ಆಧಾರದಲ್ಲಿ 60 ಅಂಕಕ್ಕೆ ಪರೀಕ್ಷೆ ನಡೆಯಲಿದೆ. ಅಲ್ಲಿ 20ಕ್ಕಿಂತ ಹೆಚ್ಚು ಅಂಕಗಳಿಸಿದವರು ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಜತೆಗೆ ಮಾ.22ರಂದು ಮುಖ್ಯ ಪ್ರಬಂಧ ಸ್ಪರ್ಧೆ ಮಂಡ್ಯ ನಗರದ ಪಿಇಎಸ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಅಂಬೇಡ್ಕರ್ ಅಧ್ಯಯನ ಸಂಸ್ಥೆಯಿಂದ ಮೌಲ್ಯ ಮಾಪನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನಕ್ಕೆ ಡಾ.ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆಯಿಂದ 37 ಸಾವಿರ ರೂ ಮೌಲ್ಯದ ಟ್ಯಾಬ್, ಎರಡನೇ ಬಹುಮಾನವಾಗಿ ಇಬ್ಬರಿಗೆ ತಲಾ 5,000 ರೂ, 3ನೇ ಬಹುಮಾನವಾಗಿ ಮೂವರಿಗೆ ತಲಾ 2,000 ರೂ ನೀಡಲಾಗುವುದು. ಇದು ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿರುತ್ತದೆ ಎಂದು ವಿವರಿಸಿದರು.
ಮೈಸೂರು ಜಿಲ್ಲಾ ಸಂಚಾಲಕ, ಮಂಡ್ಯ ಜಿಲ್ಲಾ ಸಂಚಾಲಕ ಹುರುಗಲವಾಡಿ ರಾಮಯ್ಯ, ಅಶೋಕ್, ಕೆ.ಪಲ್ಲವಿ, ಸಿದ್ದರಾಜು, ಶಿವಮ್ಮ, ಮರಿಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net