ಜು.11ರಂದು ರಾಷ್ಟ್ರೀಯ ಲೋಕ ಅದಾಲತ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ಮಾಹಿತಿ

ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜಿ ಸಂಧಾನದ ಮೂಲಕ ಪ್ರಕರಣದ ಇತ್ಯರ್ಥ
ಮಂಡ್ಯ: ರಾಜಿ ಆಗಬಹುದಾಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಜು.11ರಂದು ಜಿಲ್ಲೆಯ ಏಳು ತಾಲೂಕಿನಲ್ಲಿಯೂ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್.ಸುಬ್ರಮಣ್ಯ ಹೇಳಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಾಲತ್ ಅಂಗವಾಗಿ ಪೂರ್ವಭಾವಿ ಬೈಠಕ್ ನಡೆಸಲಾಗುವುದು. ಆಸ್ತಿ ವಿವಾದ, ಸಿವಿಲ್ ವ್ಯಾಜ್ಯ, ವಿಭಾಗದ ದಾವೆ, ಹಣ ವಸೂಲಾತಿ ದಾವೆ, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳನ್ನು ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.
ಅಂತೆಯೇ ಮೋಟಾರು ವಾಹನಗಳ ಪ್ರಕರಣ, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣ, ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ, ಚೆಕ್‌ಬೌನ್ಸ್, ಎಲ್‌ಎಸಿ ಪ್ರಕರಣ, ಎಕ್ಸ್‌ಕ್ಯೂಷನ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದಾಲತ್ ಪೀಠದಲ್ಲಿ ನ್ಯಾಯಾಧೀಶರು ಮತ್ತು ನುರಿತು ವಕೀಲರು ವಾದಿ ಮತ್ತು ಪ್ರತಿವಾದಿಗಳ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದ್ಲಲೇ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಲೋಕ ಅದಾಲತ್ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಂಡರೆ ನ್ಯಾಯಾಲಯದ ಶುಲ್ಕ ವಿಧಿಸುವುದಿಲ್ಲ. ಅಂತೆಯೇ ಈಗಾಗಲೇ ಕಟ್ಟಿರುವ ನ್ಯಾಯಾಲಯದ ಶುಲ್ಕವನ್ನು ವಾಪಸ್ ನೀಡಲಾಗುತ್ತದೆ. ಇಲ್ಲಿ ಇತ್ಯರ್ಥ ಪಡಿಸಿದ ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ವಿವರಿಸಿದರು.
ಬಾಕಿ ಇರುವ ಪ್ರಕರಣಗಳ ಜತೆಗೆ ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ ವ್ಯಾಜ್ಯಪೂರ್ವ ಪ್ರಕರಣಗಳು(ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೋಟಿಸ್ ನೀಡಿ ಕರೆಸಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಸಾರಿಗೆ ಇಲಾಖೆಯಲ್ಲಿ 1991 ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ಹಾಗೂ ಬಾಕಿ ಇರುವ ಪ್ರಕರಣಗಳು ಹಾಗೂ ಪೊಲೀಸ್ ಇಲಾಖೆಯಲ್ಲಿ ಸಂಚಾರ ಇ-ಚಲನ್‌ನಲ್ಲಿ 2023 ಫೆ.11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿ ಅದೇಶಿಸಿದೆ. ದಂಡ ಪಾವತಿಸಲು ಜು.10 ರೊಳಗೆ ಕಾಲಾವಕಾಶ ನೀಡಲಾಗಿದೆ. ಮಂಡ್ಯ ನಗರ ಸಂಚಾರ ಮತ್ತು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯಲ್ಲಿ ಕೌಂಟರ್‌ಗಳಲ್ಲಿ ದಂಡ ಪಾವತಿಸಬಹುದು ಎಂದು ಹೇಳಿದರು.
2026ರ ಸುಪ್ರಿಂಕೋರ್ಟ್ ವಿಶೇಷವಾಗಿ ಸಮಾಧಾನ್ ಸಮರೋಹ್ ವಿಶೇಷ ಲೋಕ ಅದಾಲತನ್ನು ಆ.21, 22 ಹಾಗೂ 23 ರಂದು ಆಯೋಜಿಸಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ 21 ಪ್ರಕರಣ ಗುರುತಿಸಲಾಗಿದೆ. ಕಕ್ಷಿದಾರರಿಗ ಅನುಕೂಲವಾಗುವ ರೀತಿಯಲ್ಲಿ ಪೂರ್ವ ಸಂಧಾನ ನಡೆಸಲಾಗುತ್ತಿದ್ದು, ಈಗಾಗಲೇ ಸಂಧಾನ ಪ್ರಕ್ರಿಯೆಗಳು ಆರಂಭಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಡಿವೈಎಸ್‌ಪಿ ಶಿವಮೂರ್ತಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸತ್ಯಾನಂದ, ಉಪಾಧ್ಯಕ್ಷ ಮರೀಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net