ಅರಣ್ಯ ಕೃಷಿಗೆ ಒತ್ತು ಕೊಡಲಿ: ಬೆಂಗಳೂರು ಕೃಷಿ ವಿವಿ ಸಂಶೋಧನಾ ನಿರ್ದೇಶಕ ಎಂ.ಎ.ಶಂಕರ್ ಸಲಹೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಹಾಗೂ ಮಳವಳ್ಳಿ ಪ್ರಗತಿಪರ ಕೃಷಿಕ ನಾಗರಾಜುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಹಾಗೂ ಮಳವಳ್ಳಿ ಪ್ರಗತಿಪರ ಕೃಷಿಕ ನಾಗರಾಜುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ
  • ಕರ್ನಾಟಕ ಸಂಘದ ವತಿಯಿಂದ ಆಯೋಜನೆ
ಮಂಡ್ಯ: ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪರಿಣಾಮ ತಿಪ್ಪೆ ಗೊಬ್ಬರ ಕಣ್ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಗುಣ ಕಾಪಾಡಲು ಹಸಿರು ಎಲೆ ಗೊಬ್ಬರ ಹೆಚ್ಚು ಉತ್ಪಾದನೆಯಾಗುವಂತೆ ನೋಡಿಕೊಳ್ಳಬೇಕಿದೆ. ಈ ಮೂಲಕ ಕೃಷಿ ಅರಣ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಬೆಂಗಳೂರು ಕೃಷಿ ವಿವಿ ಸಂಶೋಧನಾ ನಿರ್ದೇಶಕ ಎಂ.ಎ.ಶಂಕರ್ ಸಲಹೆ ನೀಡಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ವೈ.ಕೆ.ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕೃಷಿ ಅರಣ್ಯ ಪದ್ಧತಿ ಇದ್ದರೆ ದಿನದ 24 ಗಂಟೆ ಆಮ್ಲಜನಕ ಪಡೆಯಬಹುದು. ಆಂಧ್ರಪ್ರದೇಶದಲ್ಲಿ ಅರಳಿಮರ ಸೊಪ್ಪಿನ ಮಾರಾಟಕ್ಕೆ ಮಾರುಕಟ್ಟೆಯನ್ನೇ ಸ್ಥಾಪಿಸಲಾಗಿದೆ. ಕುರಿ, ಮೇಕೆಗಳಿಗೆ ಇಲ್ಲಿ ಅರಳಿ ಸೊಪ್ಪನ್ನು ಮಾರಾಟ ಮಾಡುತ್ತಾರೆ. ಇನ್ನೂ ನುಗ್ಗೇಗಿಡದಲ್ಲಿ ಔಷಧ ಗುಣವಿದ್ದು, ಅದನ್ನು ಯಥೇಚ್ಚವಾಗಿ ಬಳಸಬೇಕು. ಹಸುಗಳಿಗೆ ಒಣ ಹುಲ್ಲನ್ನು 5 ಕೆ.ಜಿ.ಗಿಂತ ಹೆಚ್ಚಾಗಿ ಕೊಡಬಾರದು. ಹಸಿರು ಎಲೆ ಮೇವನ್ನು ಹೆಚ್ಚಾಗಿ ನೀಡಬೇಕು ಎಂದು ಕಿವಿಮಾತು ಹೇಳಿದರು.
ಭೂಮಿಗೆ ಸಾವಯವ ಅಂಶ ಬೇಕಿದೆ. ಮಣ್ಣಿನ ರಸಸಾರ, ಸೂಕ್ಷ್ಮಜೀವಾಣು, ಸೂಕ್ಷ್ಮಪೋಷಕಾಂಶ, ನೀರು, ಗಾಳಿ ಎಂಬ ಪಂಚ ತತ್ವಗಳು ಮಣ್ಣಿನ ಸಂರಕ್ಷಣೆ ಮಾಡುತ್ತವೆ. ಮಣ್ಣಿನ ಫಲವತ್ತತೆ ಬಗ್ಗೆ ನಮ್ಮ ಪೂರ್ವಿಕರು ಹೇಳಿಕೊಟಿದ್ದಾರೆ. ಹಸಿರೆಲೆ ಗೊಬ್ಬರಗಳು, ಯಾವುದೇ ಸಸಿಗಳನ್ನು ತೆಗೆದುಕೊಳ್ಳಿ ಅದರಲ್ಲಿ ಔಷಧೀಯ ಗುಣವಿರುತ್ತದೆ. ಚಕ್ಕೊತಾ, ಬೆಣ್ಣೆ ಹಣ್ಣು, ಸೇಬು, ಸೀತಾಫಲದಂತಹ ಸಸಿಗಳನ್ನು ಬೆಳೆಸುವುದರಿಂದ ಮಣ್ಣಿನ ಸಂರಕ್ಷಣೆ ಹಾಗೂ ಹಸಿರೆಲೆ ಗೊಬ್ಬರ ಯಥೇಚ್ಚವಾಗಿ ಸಿಗುತ್ತದೆ. ಜಾನುವಾರುಗಳಿಂದ ಮೀಥೈಲ್ ರಾಸಾಯನಿಕ ವಸ್ತು ಅಷ್ಟಾಗಿ ಬರುವುದಿಲ್ಲ. ಬದಲಿಗೆ ಕಾರ್ಖಾನೆಗಳಿಂದ ಮೀಥೈಲ್ ರಾಸಾಯನಿಕ ಬರುತ್ತಿದೆ. 27 ಮಳೆ, 27 ನಕ್ಷತ್ರಗಳು ಇವೆ. ಕೇವಲ 9 ಮಳೆಗಳು ಮಾತ್ರ ಕೃಷಿಗೆ ಯೋಗ್ಯವಾಗಿವೆ. ಧರಣಿ ಮಳೆಗೆ ನೆಲಗಡಲೆ ಮತ್ತು ಎಳ್ಳು ಬಿತ್ತುತ್ತಿದ್ದರು. ಈಗ ಯಾರೂ ಬಿತ್ತನೆ ಮಾಡುತ್ತಿಲ್ಲ ಎಂದು ವಿಷಾದಿಸಿದರು.
ತೇಗ ನಮ್ಮ ಭಾಗದಲ್ಲಿ ಬೆಳೆಯುವುದಿಲ್ಲ. ಏಕೆಂದರೆ ಕರಿ ನಾಯಿಯನ್ನು ಬಿಳಿ ನಾಯಿಯನ್ನಾಗಿ ಮಾಡಿದಂತಾಗುತ್ತದೆ. ಇದಕ್ಕೆ ವಾತಾವರಣ ಬೇಕಿದೆ, ಇದರ ಬದಲು ಬೇವು, ಹೆಬ್ಬೇವು, ಬಸರಿ, ಹೊಂಗೆ, ಆಲದ ಸಸಿಗಳನ್ನು ನೆಟ್ಟು ಮರ ಮಾಡುವುದರಿಂದ ವಾತಾವರಣಕ್ಕೆ ಬೇಕಾದ ಅಂಶಗಳನ್ನು ತಂದುಕೊಡುತ್ತವೆ. ನೀರನ್ನು ಸಂರಕ್ಷಣೆ ಮಾಡಬೇಕು, ನೀರನ್ನು ಯಾವ ರೀತಿ ಬಳಸಬೇಕನ್ನುವುದೇ ಗೊತ್ತಿಲ್ಲ. ಸಬ್ಸಿಡಿ ಹಿಂದೆ ಹೋಗಬೇಡಿ, ಮೊದಲು ಕೃಷಿ ವಿಧಾನಗಳನ್ನು ಕಲಿತು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಮೊಘಲರ ಕಾಲದಲ್ಲಿ ಭೂಮಿಯ ಫಲವತ್ತತೆಗೆ ಸಂಬಂಧಿಸಿದಂತೆ ಶೇ.3 ರಷ್ಟು ಅರ್ಗ್ಯಾನಿಕ್ ಕಾರ್ಬನ್ ಇತ್ತು. ಆದರೆ ಇಂದು 0.5 ಗೆ ಬಂದಿರುವುದಕ್ಕೆ ಸರಿಯಾದ ರೀತಿಯಲ್ಲಿ ಸಾವಯವ ಗೊಬ್ಬರ ಹಾಕುತ್ತಿಲ್ಲ. ಕೋಳಿ ಗೊಬ್ಬರ ಹಾಕಬಹುದು ಎನ್ನುತ್ತಾರೆ, ಇದರಲ್ಲಿ ಟ್ರಯಾಸಿಕ್ ಎಂಬ ಆಸಿಡ್ ಪದಾರ್ಥ ಹೆಚ್ಚಿರುತ್ತದೆ. ಒಂದು ಟನ್ ಕೋಳಿ ಗೊಬ್ಬರಕ್ಕೆ 8 ಕೆ.ಜಿ.ಯಷ್ಟು ಸುಣ್ಣ ಮಿಶ್ರಣದ ನೀರನ್ನು ಸಿಂಪಡಿಸಿ, ಒಂದು ತಿಂಗಳ ನಂತರ ಆ ಗೊಬ್ಬರ ಬಳಸಿದರೆ ದುಷ್ಪರಿಣಾಮ ಕಡಿಮೆ ತಡೆಯಬಹುದು ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಮಾತನಾಡಿ, ನಮ್ಮಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದರ ಅರಿವು ಕಡಿಮೆಯಾಗಿದೆ. ಅದಕ್ಕಾಗಿ ಮಂಡ್ಯದಲ್ಲಿ 50ಕ್ಕೂ ಹೆಚ್ಚು ಯುವ ರೈತರಿಗೆ ಯಾವ ಬೆಳೆ ಬೆಳೆಯುವುದು ಸೂಕ್ತ ಎಂಬುವುದಕ್ಕೆ ತರಬೇತಿ ನೀಡಲು ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಂಡ್ಯ ಕೃಷಿ ವಿವಿಯ ನಿವೃತ್ತ ವಿಶೇಷ ಅಧಿಕಾರಿ ಡಾ.ಹರಿಣಿಕುಮಾರ್, ಸಂಘದ ಕಾರ್ಯದರ್ಶಿ ಚಂದಗಾಲು ಲೋಕೇಶ್, ನಿರ್ದೇಶಕರಾದ ಕೋಣನಹಳ್ಳಿ ಜಯರಾಂ, ಸೋಮಶೇಖರ್ ಇತರರಿದ್ದರು. ಇದೇ ವೇಳೆ ಮಂಡ್ಯ ಕೃಷಿ ವಿವಿ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಅವರಿಗೆ ಕೃಷಿ ತಜ್ಞ ಪ್ರಶಸ್ತಿ ಹಾಗೂ ಮಳವಳ್ಳಿ ಪ್ರಗತಿಪರ ಕೃಷಿಕ ನಾಗರಾಜು ಅವರಿಗೆ ಕೃಷಿ ಪ್ರಶಸ್ತಿಯನ್ನು ತಲಾ 15 ಸಾವಿರ ರೂ. ನಗದಿನ ಜತೆಗೆ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net