ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಸಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಎಸಿ ಶಿವಮೂರ್ತಿ ಇತರರಿದ್ದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು. ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಸಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಎಸಿ ಶಿವಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರವಾಸ
  • ಕರ್ತವ್ಯದಲ್ಲಿ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಿ
  • ಜಿಲ್ಲಾಧಿಕಾರಿ ಡಾ.ಕುಮಾರ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಮಂಡ್ಯ: ಮಳವಳ್ಳಿಯಲ್ಲಿ ಹಮ್ಮಿಕೊಂಡಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಡಿ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ತವ್ಯದಲ್ಲಿ ಲೋಪ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅವರು ಸಂಚರಿಸುವ ರಸ್ತೆ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು. ಸ್ವಚ್ಛತೆ ಮಾಡಬೇಕು. ಆಂಬ್ಯುಲೆನ್ಸ್ ಹಾಗೂ ತಜ್ಞ ವೈದ್ಯರ ಸೇವೆ ಒದಗಿಸಬೇಕು ಎಂದು ತಿಳಿಸಿದರು.
ಹೆಲಿಪ್ಯಾಡ್ ಸುತ್ತಾ ಬ್ಯಾರಿಕೇಡ್ ಹಾಕಬೇಕು. ಗ್ರೀನ್ ರೂಮ್ ನಿರ್ಮಾಣ ಸೇರಿದಂತೆ ಕಾರ್ಯಕ್ರಮದಲ್ಲಿ ಯಾವುದೇ ವಿದ್ಯುತ್ ಅಡಚಣೆ ಆಗದಂತೆ ಚೆಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಕಾರ್ಯಕ್ರಮದ ಸ್ಧಳ ಹಾಗೂ ಪ್ರವಾಸಿ ಮಂದಿರದಲ್ಲಿ ಇಂಟರ್ನೆಟ್ ಸಂಪರ್ಕ ಹಾಗೂ ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳ, ಹೆಲಿಪ್ಯಾಡ್ ಸ್ಥಳಗಳಲ್ಲಿ ಅಗ್ನಿ ಶಾಮಕ ದಳದ ವಾಹನ ನಿಯೋಜಿಸಬೇಕು. ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಇಲಾಖೆಗಳಿಂದ ಸ್ಟಾಲ್‌ಗಳ ನಿರ್ಮಾಣ ಮಾಡುವಂತೆ ಹಾಗೂ ಅಲ್ಲಿ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು ಹಾಗೂ ಶೌಚಗೃಹದ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net