ನೀರಿನ ಸದ್ಬಳಕೆಗೆ ಒತ್ತು ನೀಡಲಿ: ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ

ಮಂಡ್ಯ ತಾಲೂಕು ವಿ.ಸಿ ಫಾರಂನಲ್ಲಿ ಆಯೋಜಿಸಿದ್ದ ಪೂರ್ವ ಮುಂಗಾರು ಆಂದೋಲನ ಕಾರ್ಯಕ್ರಮವನ್ನು ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಉದ್ಘಾಟಿಸಿದರು.
ಮಂಡ್ಯ ತಾಲೂಕು ವಿ.ಸಿ ಫಾರಂನಲ್ಲಿ ಆಯೋಜಿಸಿದ್ದ ಪೂರ್ವ ಮುಂಗಾರು ಆಂದೋಲನ ಕಾರ್ಯಕ್ರಮವನ್ನು ಕೃಷಿ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿ.ಸಿ ಫಾರಂನಲ್ಲಿ ಪೂರ್ವ ಮುಂಗಾರು ಆಂದೋಲನ
  • ವಿವಿಧೆಡೆಯಿಂದ ಸಾವಿರಾರೂ ರೈತರು ಭಾಗಿ
ಮಂಡ್ಯ: ಇಂದಿನ ಹವಾಮಾನ ವೈಪರೀತ್ಯ ಹಾಗೂ ನೀರಿನ ಕೊರತೆಯ ಪರಿಸ್ಥಿತಿ ಇದೆ. ಆದ್ದರಿಂದ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ರೈತರು ಗಮನಹರಿಸಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ ನೀಡಿದರು.
ತಾಲೂಕಿನ ವಿ.ಸಿ ಫಾರಂನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಬೀಜೋತ್ಸವ ಹಾಗೂ ಪೂರ್ವ ಮುಂಗಾರು ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀರಿನ ಸದ್ಬಳಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜತೆಗೆ ಬೆಳೆಯಲ್ಲಿ ವೈವಿಧ್ಯತೆ ಅಳವಡಿಸಿಕೊಂಡರೆ ಮಾತ್ರ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ತಿಳಿಸಿದರು.
ದೇಸಿ ಬಿತ್ತನೆ ಬೀಜಗಳ ಮಹತ್ವವನ್ನು ಉಲ್ಲೇಖಿಸಿದ ಅವರು, ರೈತರು ದೇಸಿ ಬಿತನ್ನೆ ಬೀಜಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು. ಉತ್ತಮ ಬಿತ್ತನೆ ಬೀಜ ಬಳಕೆ ಮಾಡಿದಲ್ಲಿ ಬೆಳೆ ಉತ್ತಮವಾಗಿ ಬೆಳೆಯಬಹುದು. ಆ ಮೂಲಕ ಹೆಚ್ಚಿನ ಇಳುವರಿ ಪಡೆದು ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.
ರೈತರ ಬಳಿಯಲ್ಲಿ ಉತ್ತಮ ಗುಣಮಟ್ಟದ ಹಾಗೂ ವಿಶಿಷ್ಟ ಲಕ್ಷಣಗಳಿರುವ ದೇಸಿ ಬಿತ್ತನೆ ಬೀಜಗಳು ಕಂಡುಬಂದಲ್ಲಿ ಅವುಗಳನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಲು ಮನವಿ ಮಾಡಿದ ಡಾ.ಕೆ.ಸಿ.ನಾರಾಯಣಸ್ವಾಮಿ, ಅಂತಹ ಬಿತ್ತನೆ ಬೀಜಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಇತರ ರೈತರಿಗೆ ಹಂಚುವ ಕಾರ್ಯವನ್ನು ವಿಶ್ವವಿದ್ಯಾಲಯ ಕೈಗೊಳ್ಳಲಿದೆ. ವಿವಿಯಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ಅವುಗಳ ಕುರಿತು ಮಾಹಿತಿ ಪಡೆದು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ ವರ್ಷ ಸುಮಾರು 5 ಸಾವಿರ ಟನ್ ಬೀಜೋತ್ಪಾದನೆ ಮಾಡಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಷಯವಾಗಿದೆ. ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿಶ್ವವಿದ್ಯಾಲಯ ಬದ್ಧವಾಗಿದೆ. ಸಂಶೋಧನೆಯಿಂದ ಅಭಿವೃದ್ಧಿಪಡಿಸಿದ ಉತ್ತಮ ತಳಿಗಳನ್ನು ವಿಸ್ತರಣಾ ಚಟುವಟಿಕೆಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ವಿಶ್ವವಿದ್ಯಾಲಯ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಡಾ.ಬಸವೇಗೌಡ ಮಾತನಾಡಿ, ಉತ್ತಮ ಬಿತ್ತನೆ ಬೀಜವನ್ನು ಗುಣಮಟ್ಟದ ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ರೈತರಿಗೆ ಉತ್ತಮ ಇಳುವರಿ ದೊರೆಯುತ್ತದೆ. ಇಂತಹ ವಿಶೇಷ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸುವ ಅಗತ್ಯವಿದೆ. ಇದರಿಂದ ರೈತರಿಗೆ ಅನುಕೂಲವಾಗುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸರ್ಕಾರ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇಂದಿನ ದಿನಗಳಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಇದರ ಪರಿಣಾಮ ಕೃಷಿ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ರೈತರು ಸ್ವಾವಲಂಬಿಗಳಾಗಿ ಸಂತೋಷದಿಂದ ಬದುಕಲು ಕೃಷಿ ಉದ್ಯಮದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ ವಹಿಸಿ ಮಾತನಾಡಿದರು. ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ, ಕುಲಸಚಿವೆ ಡಾ.ಪಿ.ಎಸ್.ಫಾತಿಮಾ, ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್, ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್.ಬಸವರಾಜು, ಬಿತ್ತನೆ ಬೀಜ ಘಟಕದ ವಿಶೇಷಾಧಿಕಾರಿ ಹಾಗೂ ಕಾರ್ಯಕ್ರಮದ ಸಂಘಟಕ ಡಾ.ಎಸ್.ಬಿ.ಯೋಗಾನಂದ, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಉಪಸ್ಥಿತರಿದ್ದರು.
ಬೀಜೋತ್ಸವದ ಅಂಗವಾಗಿ ವಿ.ಸಿ ಫಾರಂನಲ್ಲಿ ಆಯೋಜಿಸಿದ್ದ ಮಳಿಗೆಯನ್ನು ರೈತರು ವೀಕ್ಷಿಸುತ್ತಿರುವುದು.

ನಿರೀಕ್ಷೆಗೂ ಮೀರಿದ ರೈತರ ಆಗಮನ
ಬೀಜೋತ್ಸವ ಹಾಗೂ ಪೂರ್ವ ಮುಂಗಾರು ಆಂದೋಲನಕ್ಕೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ರೈತರು ಆಗಮಿಸಿದರು. ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಮಹತ್ವ, ಅವುಗಳ ಸಮಯೋಚಿತ ಲಭ್ಯತೆ ಹಾಗೂ ಸುಧಾರಿತ ತಳಿಗಳ ಬಳಕೆಯನ್ನು ಉತ್ತೇಜಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಅದರಂತೆ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಪ್ರಾಧ್ಯಾಪಕರು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸಾವಿರಕ್ಕೂ ಅಧಿಕ ರೈತರು ಹಾಗೂ ದೇಸಿ ತಳಿಯ ಸಂರಕ್ಷಕರು ಹಾಗೂ ಪ್ರಗತಿಪರ ರೈತರು ಭಾಗವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ತಿಮ್ಮೇಗೌಡ ಹಾಗೂ ದೇಸಿ ತಳಿಗಳ ಸಂರಕ್ಷಕ ಡಾ.ಕೆ.ಪಿ.ಕೃಷ್ಣಪ್ರಸಾದ್ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ತಾಂತ್ರಿಕ ಕಾರ್ಯಕ್ರಮದಲ್ಲಿ ಮುಂಗಾರು ಸಿದ್ಧತೆ, ದೇಸಿ ತಳಿಗಳ ಸಂರಕ್ಷಣೆ, ಗುಣಮಟ್ಟದ ಬೀಜಗಳ ಆಯ್ಕೆ ಹಾಗೂ ಪ್ರಮುಖ ಕೃಷಿ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳ ಕುರಿತು ಮಾಹಿತಿ ನೀಡಲಾಯಿತು. ವಿಶೇಷವಾಗಿ ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಮಳಿಗೆ ತೆರೆಯಲಾಗಿತ್ತು. ಇದರ ಮೂಲಕ ರೈತರಿಗೆ ವಿವಿಧ ಕೃಷಿ ತಂತ್ರಜ್ಞಾನಗಳು, ಬಿತ್ತನೆ ಬೀಜಗಳು ಹಾಗೂ ನವೀನ ಪದ್ಧತಿಗಳ ಕುರಿತು ಮಾಹಿತಿ ನೀಡಿದವು. ಇದೇ ವೇಳೆ ಬಿತ್ತನೆ ಬೀಜ ಮಾರಾಟ ನಡೆಯಿತು. ರೈತರಿಗೆ ವಿವಿ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net