ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಿಂದ ಛತ್ರಿ, ಚಾಮರ, ತ್ರಿಶೂಲ, ಕೊಂಬು ಕಹಳೆ, ತಮಟೆ, ಮಂಗಳವಾದ್ಯ ಸಮೇತ ಗ್ರಾಮದ ಜನರು ಊರ ಹೊರಭಾಗದಲ್ಲಿರುವ ಗಿಂಡಿ ಆಲದ ಮರದ ಬಳಿಗೆ ತೆರಳಿದರು. ನಂತರ ಚಿಕ್ಕಕೆರೆಯಿಂದ ಶುದ್ಧವಾಗಿ ತಂದಿದ್ದ ಮಣ್ಣಿನಿಂದ ಕೊಲ್ಲಾಪುರದಮ್ಮ ದೇವಿಯ ಮೂರ್ತಿ ನಿರ್ಮಿಸಿ ಅರಿಶಿನ ಕುಂಕುಮದಿಂದ ಅಲಂಕರಿಸಿ ಹಸಿರು ಚಪ್ಪರದಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಹೋಮ ಅವನಾದಿಗಳನ್ನು ನೆರವೇರಿಸಿ ತಾಯಿಗೆ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.