ಸಸ್ಯ ಪ್ರಬೇಧ ಸಂರಕ್ಷಣೆಯಾಗಲಿ: ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಹೇಳಿಕೆ

ಮಂಡ್ಯ ತಾಲೂಕು ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಸಸ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಡಲಾಯಿತು.
ಮಂಡ್ಯ ತಾಲೂಕು ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಸಸ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಸಸ್ಯೋತ್ಸವ
  • ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಯೋಜನೆ ವತಿಯಿಂದ ಆಯೋಜನೆ
ಮಂಡ್ಯ: ಸಸ್ಯ ಪ್ರಬೇಧಗಳ ಬಗ್ಗೆ ಅರಿವು ಹೊಂದುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಹೇಳಿದರು.
ತಾಲೂಕಿನ ಕಲ್ಮಂಟಿದೊಡ್ಡಿ ಗ್ರಾಮದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಮಹಿಳಾ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಯೋಜನೆ ವತಿಯಿಂದ ಆಯೋಜಿಸಿದ್ದ ಸಸ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಸಂರಕ್ಷಿಸುವುದು ಪ್ರಜ್ಞಾವಂತ ಜನರ ಜವಾಬ್ದಾರಿಯಾಗಿದೆ. ಸಮತೋಲಿತ ಪರಿಸರವನ್ನು ಕಾಯ್ದುಕೊಳ್ಳಲು ಭೂಮಿ ಮೇಲಿನ ಜೀವಿಗಳ ಅಸ್ಥಿತ್ವಕ್ಕೆ ವಿಶೇಷ ಆಸಕ್ತಿಯನ್ನು ಯುವಜನರು ಬೆಳೆಸಿಕೊಳ್ಳುವುದು ಅವಶ್ಯಕತೆ ಇದೆ ಎಂದರು.
ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಭೂಮಿಗೆ ಹೆಚ್ಚು ಹಸಿರು ಹೊದಿಸುವ ಕಾರ್ಯ ಮಾಡುವುದು ಅನಿವಾರ್ಯವಾಗಿದೆ. ಪ್ರಕೃತಿಯಲ್ಲಿನ ಸಂಪನ್ಮೂಲಗಳನ್ನು ಸಂರಕ್ಷಿಸಿ ಪರಿಸರದ ಹಾನಿಯನ್ನು ತಡೆಯುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆಯು ಕ್ರಿಯಾ ಯೋಜನೆಯನ್ನು ರೂಪಿಸಿಕೊಂಡು ಕಾರ್ಯಮಗ್ನರಾಗುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಜನಪದ ಕಲಾವಿದ ರಾಜು ಸಬ್ಬನಹಳ್ಳಿ ಮಾತನಾಡಿ, ಪ್ರಕೃತಿ ಬಗ್ಗೆ ವಿಶೇಷ ಜ್ಞಾನ ಹೊಂದುವುದು ಮತ್ತು ಅನುಷ್ಠಾನಗೊಳಿಸುವುದು ಪವಿತ್ರವಾದ ಕಾರ್ಯ. ಈ ನಿಟ್ಟಿನಲ್ಲಿ ಎನ್‌ಎಸ್‌ಎಸ್ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಮಂಜೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಪುಷ್ಪಲತಾ ಆನಂದ್, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕ ದೊಡ್ಡಶೆಟ್ಟಿ ಇತರರಿದ್ದರು. ಇದೇ ವೇಳೆ ಪ್ರಕೃತಿ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಗೀತೆಗಳನ್ನು ಜನಪದ ಕಲಾವಿದ ರಾಜು ಸಬ್ಬನಹಳ್ಳಿ ಸಾದರಪಡಿಸಿದರು. ಸೀಬೆ, ಸಪೋಟ, ಮಾವು ಸಹಿತ ವಿವಿಧ ರೀತಿಯ ಸಸ್ಯಗಳನ್ನು ನೆಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net