ಅಭಿವೃದ್ಧಿಗೆ ಕರಡು ಸಿದ್ಧಪಡಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಯೋಜನಾ ಸಮಿತಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಯೋಜನಾ ಸಮಿತಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಯೋಜನಾ ಸಮಿತಿ ಸಭೆ
  • ಸಾರ್ವಜನಿಕರಿಗಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿ
ಮಂಡ್ಯ: ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಯ ಕರಡನ್ನು ಸಿದ್ಧಪಡಿಸಲು ಪ್ರತಿ ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿ ರಚಿಸಲಾಗಿದೆ. ಅದರಂತೆ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಇಲಾಖೆಗಳು ಸಾರ್ವಜನಿಕರಿಗಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 310ರಡಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲೆಯಲ್ಲಿರುವ ಪುರಸಭೆ, ನಗರಸಭೆ ನಿಗಮಗಳ ಯೋಜನೆಗಳನ್ನು ಕ್ರೂಢಿಕರಿಸಲು ಮತ್ತು ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಯ ಕರಡನ್ನು ಸಿದ್ಧಪಡಿಸಲು ಪ್ರತಿಯೊಂದು ಜಿಲ್ಲೆಗೂ ಒಂದೊಂದು ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸಲಾಗಿದೆ ಎಂದರು.
ಪ್ರಾದೇಶಿಕ ಯೋಜನೆ, ನೀರಿನ ಹಂಚಿಕೆ ಮತ್ತು ಇತರೆ ಭೌಗೋಳಿಕ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ ಮೂಲಕ ಪರಿಕರಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವುಗಳನ್ನು ಒಳಗೊಂಡಂತೆ ಜಿಪಂ, ತಾಪಂ, ಗ್ರಾಪಂ, ಪಟ್ಟಣ ಪಂಚಾಯಿತಿ, ಜಿಲ್ಲೆಯ ಪುರಸಭೆ ನಿಗಮ ಮತ್ತು ಪುರಸಭೆ ಪರಿಷತ್ ನಡುವಣ ಸಮಾನ ಹಿತಾಸಕ್ತಿಯ ವಿಷಯಗಳನ್ನು ಒಳಗೊಂಡಂತೆ ಗ್ರಾಮೀಣ, ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಸಿದ್ಧಿಪಡಿಸಿ ಸಮನ್ವಯಗೊಳಿಸುವುದು ಜಿಲ್ಲಾ ಯೋಜನಾ ಸಮಿತಿಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ವೈದ್ಯಕೀಯ ಹಾಗೂ ಜನಾರೋಗ್ಯ, ನೀರು ಪೂರೈಕೆ ಮತ್ತು ನೈರ್ಮಲ್ಯ, ವಸತಿ, ಉದ್ಯೋಗ, ಕೃಷಿ ಮತ್ತು ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ವಲಯಗಳಲ್ಲಿ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ವಾರ್ಷಿಕ ದೂರದೃಷ್ಟಿ ಯೋಜನೆಯನ್ನು ಜಿಲ್ಲಾ ಯೋಜನಾ ಸಮಿತಿ ರಚಿಸುತ್ತದೆ. ಅಭಿವೃದ್ಧಿಗಾಗಿ ನಿಗದಿಗೊಳಿಸಲಾಗಿರುವ ಸ್ಥಳೀಯ ಸಂಪನ್ಮೂಲ, ರಾಜ್ಯ ಹಣಕಾಸು ಆಯೋಗದ ಅನುದಾನ, ಕೇಂದ್ರ ಹಣಕಾಸು ಆಯೋಗದ ಅನುದಾನ, ಅನಿರ್ಬಂಧಿತ ಅನುದಾನ, ಕೇಂದ್ರ ವಲಯದ ಯೋಜನೆಗಳ ಅನುದಾನ, ರಾಜ್ಯ ವಲಯದ ಯೋಜನೆಗಳ ಅನುದಾನ, ನಗರಾಭಿವೃದ್ಧಿ ಸಂಸ್ಥೆಗಳಿಗೆ ವರ್ಗಾಯಿಸಿರುವ ಸಂಪನ್ಮೂಲಗಳ ಮೂಲಕ ಯೋಜನಾ ತಯಾರಿಕೆಗೆ ಲಭ್ಯವಾಗುವ ಅನುದಾನವನ್ನು ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಜನರ ಸಮಸ್ಯೆಗಳ ಮಾಹಿತಿಯನ್ನು ಸಂಗ್ರಹಿಸಿ ವಾಸ್ತವ ಸ್ಥಿತಿಯನ್ನು ವಿಶ್ಲೇಷಿಸಿ ಯೋಜನೆಯನ್ನು ಸಿದ್ಧಪಡಿಸಿ. ಜಿಲ್ಲಾ ಯೋಜನಾ ಸಮಿತಿ ಸಭೆಯ ಪ್ರಗತಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಿ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಗ್ರಾಮ ಪಂಚಾಯಿತಿ 5 ಸಾವಿರ ರೂ, ತಾಲೂಕು ಪಂಚಾಯಿತಿ 25 ಸಾವಿರ ರೂ, ಜಿಲ್ಲಾ ಪಂಚಾಯಿತಿ 2 ಲಕ್ಷ ರೂ, ಪಟ್ಟಣ ಪಂಚಾಯಿತಿ 7,500 ರೂ, ಪುರಸಭೆಗಳು(ಟಿ.ಎಂ.ಸಿ) 25 ಸಾವಿರ ರೂ, ನಗರಸಭೆ(ಸಿ.ಎಂ.ಸಿ) 1 ಲಕ್ಷ ರೂ, ಕಾರ್ಪೋರೇಷನ್‌ನಿಂದ 2 ಲಕ್ಷ ರೂಗಳನ್ನು ವಾರ್ಷಿಕ ವಂತಿಕೆಯಾಗಿ ಜಿಲ್ಲಾ ಯೋಜನಾ ಸಮಿತಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ತಲಾ ಆದಾಯದಲ್ಲಿ ಉತ್ತಮವಾಗಿದೆ. 2024-25ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ ಮಂಡ್ಯ ಜಿಲ್ಲೆಯ ತಲಾ ಆದಾಯ 3,06,448 ರೂಗಳಾಗಿದೆ. ಕರ್ನಾಟಕದ ತಲಾ ಆದಾಯ 3,39,813 ರೂ ಹಾಗೂ ಭಾರತದ ತಲಾ ಆದಾಯ 1,84,202 ರೂ ಆಗಿದೆ. ರಾಜ್ಯದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಂಡ್ಯ ಜಿಲ್ಲೆ 6ನೇ ಸ್ಥಾನ ಗಳಿಸಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲಾ ಸುಸ್ಥಿರ ಅಭಿವೃದ್ಧಿ ಯೋಜನೆ -2031 ಹಾಗೂ ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025ಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ವರದಿ ತಯಾರಿಕೆಗೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಿಂದ ತಾಂತ್ರಿಕ ಬೆಂಬಲವನ್ನು ಪಡೆಯಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಪಿ.ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಇತರರಿದ್ದರು.

ಬಡತನ ನಿರ್ಮೂಲನೆ ಗುರಿ
2031ರ ವೇಳೆಗೆ ವಿವಿಧ ರೀತಿಯ ಬಡತನ ನಿರ್ಮೂಲನೆ ಮಾಡಿ ಅಭಿವೃದ್ಧಿ ಸಾಧಿಸಲು 17 ಗುರಿಗಳ ಸಾಧನೆಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬಡತನ ನಿರ್ಮೂಲನೆ, ಹಸಿವು ಮುಕ್ತ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಕೈಗೆಟುಕುವ ಮತ್ತು ಶುದ್ಧ ಶಕ್ತಿ, ಗೌರವಯುತ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಉದ್ಯಮ ಆವಿಷ್ಕಾರ ಮತ್ತು ಮೂಲ ಸೌಕರ್ಯ, ಅಸಮಾನತೆಗಳ ಇಳಿಕೆ ಸೇರಿದಂತೆ 17 ಅಂಶವನ್ನೊಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net