ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಮದ್ದೂರು ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು. ಚಂದ್ರೇಶೇಖರ್, ಪ್ರಭುಲಿಂಗು, ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ರಾಮಲಿಂಗೇಗೌಡ ಇತರರು ಇದ್ದರು.
ಮದ್ದೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ತಾಲೂಕಿನ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಪ್ರತಿಭಟನೆ ಮಾಡಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಎಸ್.ಪ್ರಭುಲಿಂಗು ಮಾತನಾಡಿ, ರೈತರು ಕಟಾವು ಮಾಡಿ 2 ತಿಂಗಳಾದರೂ ರೈತರಿಗೆ ಕಬ್ಬಿನ ಹಣ ಕೊಟ್ಟಿಲ್ಲ. ತಕ್ಷಣ ಸಕ್ಕರೆ ಕಾಯಿದೆ ಪ್ರಕಾರ 14 ದಿನಕ್ಕೆ ಕೊಡಬೇಕಾದ ಹಣವನ್ನು ವಿಳಂಬ ಮಾಡಿರುವುದು ಸರಿಯಲ್ಲ. ತಕ್ಷಣ ರೈತರ ಖಾತೆಗಳಿಗೆ ಹಣ ಪಾವತಿಸಬೇಕೆಂದು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ 2025-26ನೇ ಸಾಲಿನ ಕಬ್ಬು ಬೆಳೆಗಾರರ ಬಾಕಿ ಪ್ರೋತ್ಸಾಹ ಧನ ಟನ್ ಕಬ್ಬಿಗೆ 50 ರೂ.ನಂತೆ ಒಟ್ಟು 250 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು ತಕ್ಷಣ ನೀಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ಸೊ.ಶಿ.ಪ್ರಕಾಶ್ ಮಾತನಾಡಿ, 2018ರಲ್ಲಿ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕೊಡಬೇಕಾದ 150 ರೂ.ಬಾಕಿ ಉಳಿಸಿಕೊಂಡಿದ್ದು, ಈ ಬಗ್ಗೆ ಕಾರ್ಖಾನೆಯವರು ಕೋರ್ಟ್ ಮೆಟ್ಟಿಲೇರಿರುವುದನ್ನು ರೈತ ಸಂಘ ಖಂಡಿಸುತ್ತದೆ ಹಾಗೂ ಬಡ್ಡಿ ಸಮೇತ ಹಣವನ್ನು ರೈತರಿಗೆ ಕಾರ್ಖಾನೆಯವರು ಕೊಡಬೇಕೆಂದು ಒತ್ತಾಯಿಸಿದರು.
ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಶೀಘ್ರವಾಗಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಯ ಉಪಾಧ್ಯಕ್ಷ ರಾಮಚಂದ್ರ ರಾವ್, ಜನರಲ್ ಮ್ಯಾನೇಜರ್ ಚಂದ್ರಶೇಖರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಮುಖಂಡರಾದ ಸೊ.ಶಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ರಾಮಲಿಂಗೇಗೌಡ, ಶಿವಳ್ಳಿ ಚಂದ್ರು, ಬೂದನೂರು ಪುಟ್ಟಸ್ವಾಮಿ, ಕುಣಿಗಲ್ ಕರಿಗೌಡ, ಯೋಗೇಶ್, ರಾಮಲಿಂಗು, ರಾಮೇಗೌಡ, ಶಿವರಾಮು, ಶಿವಲಿಂಗಯ್ಯ, ಕುಮಾರ್, ಚಂದ್ರಶೇಖರ್ ಇತರರು ಇದ್ದರು.