ಮದ್ದೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಗಳಿಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಚಲುವರಾಜು, ಪಿ.ಸಂದರ್ಶ, ಎಚ್.ಎಲ್.ಸತೀಶ್, ಧನಂಜಯ, ಕೆ.ಎಂ.ರವಿ, ಮಹಾಲಿಂಗು, ನಿತಿನ್ ಇದ್ದರು.
ಮದ್ದೂರು:ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ ಪ್ರಥಮ ಬಾರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿರುವ ಮದ್ದೂರು ಉತ್ಸವ-2026’ ಅಂಗವಾಗಿ ಹಮ್ಮಿಕೊಂಡಿರುವ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಗೆ ಸೋಮವಾರ ರಾತ್ರಿ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದೇ ಈ ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದ್ದು, ಇಲ್ಲಿನ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಆಶಿಸಿದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಟ್ರಸ್ಟ್ ವತಿಯಿಂದ ಪ್ರಥಮ ಬಹುಮಾನ: 50 ಸಾವಿರ ರೂ. ನಗದು, ದ್ವಿತೀಯ ಬಹುಮಾನ: 25 ಸಾವಿರ ರೂ. ನಗದು ಹಾಗೂ ತೃತೀಯ ಬಹುಮಾನ 10 ಸಾವಿರ ರೂ. ನಗದು ಜತೆಗೆ 10 ತಂಡಗಳಿಗೆ 10 ಸಾವಿರ ಮೊತ್ತದ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದರು.
ಎರಡು ದಿನಗಳು ನಡೆಯುವ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೆಲುವು, ಸೋಲು ಲೆಕ್ಕ ಹಾಕದೆ ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.
ಉದ್ಯಮಿ ಹಳ್ಳಿಕೆರೆ ಎಚ್.ಎಲ್.ಸತೀಶ್ ಮಾತನಾಡಿ, ಮದ್ದೂರಮ್ಮನ ಹಬ್ಬಕ್ಕೆ ಮದ್ದೂರು ಉತ್ಸವವು ಹೊಸ ಮೆರುಗು ನೀಡಿದೆ. ಶಾಸಕರ ಈ ಜನಪರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇ 6ರಂದು ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಸಂಗೀತ ಸಂಜೆಯಂದು ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ, ಬಿಇಒ ಧನಂಜಯ, ಸಮಾಜ ಸೇವಕ ಕೆ.ಎಂ.ರವಿ, ಮುಖಂಡರಾದ ಮಹಾಲಿಂಗು, ನಿತಿನ್ ಮತ್ತು ಇತರರು ಭಾಗವಹಿಸಿದ್ದರು.