ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ನಿವೇಶನಗಳಿಗೆ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಫಲಾನುಭವಿಗಳು ಗ್ರಾಪಂ ಕಚೇರಿ ಮುಂಭಾಗ ಪ್ರತಿಭನೆ ನಡೆಸಿದರು.
Published on:
Copied
Follow Us
ಪಾಂಡವಪುರ: ನಿವೇಶನ ರಹಿತರಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸುವಂತೆ ಆಗ್ರಹಿಸಿ ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ಮುಂಭಾಗ ಹರಳಹಳ್ಳಿ, ಕೆನ್ನಾಳು, ಜಯಂತಿನಗರ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ 30, 40ವರ್ಷಗಳಿಂದಲೂ ಗ್ರಾಮದಲ್ಲಿ ವಾಸವಿರುವ ನಮಗೆ ಇದುವರೆಗೂ ನಿವೇಶನ ಹಂಚಿಕೆ ಮಾಡಿಲ್ಲ. ನಿವೇಶನವಿಲ್ಲದೆ ಪರಿತಪಿಸುವಂತಾಗಿದೆ. ಹಾಗಾಗಿ ಈ ಕೂಡಲೇ ಗ್ರಾ.ಪಂ.ವತಿಯಿಂದ ನಿವೇಶನ ರಹಿತರನ್ನು ಆಯ್ಕೆ ಮಾಡಿ, ಸ್ಥಳ ಗುರುತಿಸಿ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ನನೆಗುದಿಗೆ ಬಿದ್ದಿರುವ ಹಕ್ಕುಪತ್ರಗಳನ್ನು ತಕ್ಷಣವೇ ವಿತರಿಸಬೇಕು. ಈಗಾಗಲೇ ಗ್ರಾಮ ಸಭೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರಾ.ಪಂ.ಅಧ್ಯಕ್ಷ ವಿ.ಪ್ರಕಾಶ್, ಪಿಡಿಒ ರಫೀಕ್ ಪ್ರತಿಭಟನಾಕಾರರ ಮನವಿ ಆಲಿಸಿ, ಈಗಾಗಲೇ ಗ್ರಾಮ ಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ನಿವೇಶನ ವಿತರಣೆ ಮಾಡಲು ಸ್ಥಳವನ್ನು ಕೂಡ ಗುರುತಿಸಲಾಗಿದೆ. ಇಷ್ಟರಲ್ಲಿಯೇ ಎಲ್ಲ ಅರ್ಹ ಫಲಾನುಭವಿಗಳಿಗೂ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿಲ್ಪರಾಣಿ, ಮಹೇಶ್, ಆರ್.ಅನಿತಾ, ಚಂದ್ರಿಕಾ, ಎಸ್.ಸರಸ್ವತಿ, ಎಸ್.ರಾಧ, ಜರೀನ್ ತಾಜ್, ಪಂಕಜ, ಮೋಹನ್ ಕುಮಾರ್, ಮಹಲಕ್ಷ್ಮೀ, ಎಂ.ರತಿ, ಆರ್.ರಂಗಸ್ವಾಮಿ, ಅನಿಲ್ ಕುಮಾರ್, ಸುವರ್ಣ, ಸೌಮ್ಯ, ಶಕೀಲಾ ಭಾನೂ, ಮಂಜುಳಾ, ರುಕ್ಮಿಣಿ, ಪ್ರೇಮ ಸೇರಿದಂತೆ ಹಲವರು ಭಾಗವಹಿಸಿದ್ದರು.