ಒಳ್ಳೆಯವರ ಮೌನ ವಿಷಮಯ ಸ್ಥಿತಿಯತ್ತ ಸಮಾಜ

ಪಾಂಡವಪುರ ಪಟ್ಟಣದ ಕಸಾಪ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ, ಪ್ರೊ.ದೊಡ್ಡರಸಿಕೆರೆ ಮಾಯಪ್ಪ ಅವರಿಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಚ್.ಸಿ.ಪುಟ್ಟಸ್ವಾಮಿಗೌಡ, ಜ್ಞಾನೇಶ್, ಕೋಕಿಲಾ ಇದ್ದರು.
ಪಾಂಡವಪುರ ಪಟ್ಟಣದ ಕಸಾಪ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ, ಪ್ರೊ.ದೊಡ್ಡರಸಿಕೆರೆ ಮಾಯಪ್ಪ ಅವರಿಗೆ ನರಹಳ್ಳಿ ಬಾಲಸುಬ್ರಹ್ಮಣ್ಯ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಎಚ್.ಸಿ.ಪುಟ್ಟಸ್ವಾಮಿಗೌಡ, ಜ್ಞಾನೇಶ್, ಕೋಕಿಲಾ ಇದ್ದರು.
Published on
ಪಾಂಡವಪುರ: ಒಳ್ಳೆಯವರು ಮೌನ್ಯವಹಿಸಿರುವುದರಿಂದಲೇ ಸಮಾಜ ವಿಷಮಯ ಸ್ಥಿತಿಯತ್ತ ಸಾಗುತ್ತಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವೇರಮ್ಮ ಕೃಷ್ಣೇಗೌಡ ಪ್ರತಿಷ್ಠಾನ ಸಹಯೋಗದಲ್ಲಿ ಹಸಿರು ಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ, ನರಹಳ್ಳಿ ಬಾಲ ಸುಬ್ರಹ್ಮಣ್ಯ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಸಮಾಜದಲ್ಲಿ ಒಳ್ಳೆಯವರು ಮಾತನಾಡುವ ಜತೆಗೆ ಒಳ್ಳೆಯದನ್ನು ಕೇಳಿಸಿಕೊಂಡು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ಹಾಗಾದರಷ್ಟೇ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮನುಷ್ಯ-ಮನುಷ್ಯರ ನಡುವೆ ಕಟ್ಟುವ ಕೆಲಸವಾಗಬೇಕು. ಅಂತಹ ಕೆಲಸವನ್ನು ಹಸಿರು ಭೂಮಿ ಟ್ರಸ್ಟ್‌ನ ನರಹಳ್ಳಿ ಜ್ಞಾನೇಶ್ ಮತ್ತು ಪತ್ನಿ ಕೋಕಿಲಾ ಮಾಡುತ್ತಿದ್ದಾರೆ. ಪ್ರಶಸ್ತಿಗೆ ಆಯ್ಕೆ ಮಾಡಿ ಪುರಸ್ಕಾರ ಪಡೆದಿರುವ ಎಲ್ಲರು ಸಹ ಪುರಸ್ಕಾರಕ್ಕೆ ಅರ್ಹ ವ್ಯಕ್ತಿಗಳಾಗಿದ್ದಾರೆ ಎಂದರು.
ನಾನು ಉಪವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪಟ್ಟಣದಲ್ಲಿ ಕಸಾಪ ಭವನ ನಿರ್ಮಾಣ ಮಾಡಲಾಯಿತು. ಇದೀಗ ಕಟ್ಟಡದ ಛಾವಣಿ ಬಿರುಕು ಬಿಟ್ಟು ನೀರು ಸೋರುತ್ತಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜತೆಗೂಡಿ ಭವನದ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾದರೆ ಸಮಾಜ ಪ್ರಗತಿಯತ್ತ ಸಾಗಲಿದೆ ಎಂದರು.
ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮಾ ಶೇಖರ್ ಮಾತನಾಡಿ, ರಾಜಕೀಯ, ಧಾರ್ಮಿಕ ಕ್ಷೇತ್ರಗಳು ಕಲುಷಿತಗೊಂಡಿದ್ದು ಸಮಾಜದಲ್ಲಿ ಮೌಲ್ಯಗಳು ಕುಸಿತಗೊಳ್ಳುತ್ತಿವೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹಸಿರು ಟ್ರಸ್ಟ್ ಮೂಲಕ ಜ್ಞಾನೇಶ್ ಅವರು ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವುದು ಶಿಕ್ಷಕರ ಜವಾಬ್ದಾರಿ ಹೆಚ್ಚಿಸಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ದೊಡ್ಡರಸಿಕೆರೆ ಮಾಯಪ್ಪ ಅವರಿಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಗುರುಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಶಿಕ್ಷಕರಾದ ಆನಂದ್, ಪುಷ್ಪಾ, ಸಿ.ಎಚ್.ವೆಂಕಟೇಶ್, ಎಚ್.ಆರ್.ಪೂರ್ಣಿಮಾ, ಎಂ.ಎಸ್.ಶಿವರಾಮ್, ಅನಿತ ಎಸ್.ವೈ., ಕೆ.ಆರ್.ಚಂದ್ರು, ಕೀರ್ತಿ ಅವರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಪುಟ್ಟಸ್ವಾಮಿಗೌಡ, ಬಸವೇಶ್ವರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅಮೃತಿ ರಾಜಶೇಖರ್, ಕ.ರಾ.ಸ.ನೌ.ಸಂಘದ ರಾಜ್ಯ ಕಾರ್ಯದರ್ಶಿ ಎಂ.ಜಯರಾಮ್, ಎಸ್.ಎನ್.ಕೆಂಪೇಗೌಡ, ಶಿವಕುಮಾರ್, ಲೋಕೇಶ್, ಡಾ.ಬಿ.ಬಸವರಾಜ್, ಹಸಿರು ಭೂಮಿ ಟ್ರಸ್ಟ್‌ನ ಜ್ಞಾನೇಶ್, ಕೋಕಿಲಾ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net