ಬೂದನೂರು ಉತ್ಸವಕ್ಕೆ ಚಿಣ್ಣರ ಮೆರುಗು: ಚಿತ್ರಕಲಾ ಸ್ಪರ್ಧೆಗೆ ಸಾವಿರಾರು ವಿದ್ಯಾರ್ಥಿಗಳು ಭಾಗಿ

ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು
ಮಂಡ್ಯ ತಾಲೂಕು ಹೊಸಬೂದನೂರು ಗ್ರಾಮದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಹೊಸ ಬೂದನೂರು ಗ್ರಾಮದಲ್ಲಿ ಆಯೋಜನೆ
  • ಮಕ್ಕಳೊಂದಿಗೆ ಕಾಲ ಕಳೆದ ಶಾಸಕ ರವಿಕುಮಾರ್ ಗಣಿಗ
ಮಂಡ್ಯ: ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಫೆ.21 ಮತ್ತು 22ರಂದು ನಡೆಯಲಿರುವ ಉತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಶಾಲೆಗಳಿಂದ ಆಗಮಿಸಿದ ಚಿಣ್ಣರು ಸಂಭ್ರಮದಿಂದ ಪಾಲ್ಗೊಳ್ಳುವ ಮೂಲಕ ಉತ್ಸವದ ಯಶಸ್ಸಿಗೆ ನಾಂದಿ ಹಾಡಿದರು. ಶಾಸಕ ಪಿ.ರವಿಕುಮಾರ್ ಗಣಿಗ ಅವರು ಮಕ್ಕಳೊಂದಿಗೆ ಸುಮಾರು ಹೊತ್ತು ಕಾಲಕಳೆದರು.
ಹೊಯ್ಸಳರ ದೊರೆ 3ನೇ ವೀರಬಲ್ಲಾಳನ ಕಾಲದಲ್ಲಿ ನಿರ್ಮಾಣವಾಗಿರುವ ಕಾಶಿ ವಿಶ್ವನಾಥ ಹಾಗೂ ಅನಂತಪದ್ಮನಾಭ ದೇವಾಲಯಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಜತೆಗೆ ಗ್ರಾಮದತ್ತ ಪ್ರವಾಸಿಗರನ್ನು ಸೆಳೆಯುವ ಉದ್ದೇಶದೊಂದಿಗೆ ಪಿ.ರವಿಕುಮಾರ್ ಗಣಿಗ ಬೂದನೂರು ಉತ್ಸವಕ್ಕೆ 2024ರಲ್ಲಿ ಚಾಲನೆ ನೀಡಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕೆ ಕಳೆದ ವರ್ಷ ಆಯೋಜಿಸಿರಲಿಲ್ಲ. ಆದರೆ ಈ ಬಾರಿ ವಿಭಿನ್ನ, ವಿಶೇಷತೆಗಳೊಂದಿಗೆ ಉತ್ಸವ ವಿಜೃಂಭಣೆಯಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೂ ದೇವಸ್ಥಾನಗಳ ಬಗ್ಗೆ ತಿಳಿಸಲು ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಪ್ರಾಥಮಿಕ ಶಾಲಾ ಮಕ್ಕಳಿಗೆ ‘ನಿಸರ್ಗ ಚಿತ್ರಣ’, ಪ್ರೌಢಶಾಲಾ ಮಕ್ಕಳಿಗೆ ‘ಮಂಡ್ಯ ಜಿಲ್ಲೆಯ ಐತಿಹಾಸಿಕ ತಾಣಗಳು’ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ‘ಮಂಡ್ಯ ಜಿಲ್ಲೆಯ ಜಾನಪದ ಕಲೆಗಳು’ ಕುರಿತು ಚಿತ್ರಕಲೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಉಡುಗೊರೆ ನೀಡಲಾಯಿತು. ಈ ವೇಳೆ ಪಿ.ರವಿಕುಮಾರ್ ಗಣಿಗ ಅವರು ಮಕ್ಕಳೊಂದಿಗೆ ಕಾಲಕಳೆದರು. ಡ್ರಾಯಿಂಗ್ ಶೀಟ್ ವಿತರಣೆ, ಚಿತ್ರ ಬರೆದ ಬಳಿಕ ಅದನ್ನು ಸಂಗ್ರಹಿಸಿದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಯೊಬ್ಬ ಶಾಸಕ ರವಿಕುಮಾರ್ ಗಣಿಗ ಅವರ ಚಿತ್ರ ಬಿಡಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಪಾಲಕರು ಗುರುತಿಸಬೇಕು. ಚಿತ್ರಕಲೆ ಎಂಬುದು ಪ್ರತಿಯೊಂದು ಮಗುವಿನಲ್ಲೂ ಹುಟ್ಟಿನಿಂದಲೇ ಬರುವಂತಹ ಕಲೆ. ಮಕ್ಕಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಒಳ್ಳೆಯ ವೇದಿಕೆಯಾಗಿದೆ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಬೂದನೂರಿನ ಇತಿಹಾಸ, ನಿಸರ್ಗದ ಚಿತ್ರಣ ಮತ್ತು ಜಿಲ್ಲೆಯ ಐತಿಹಾಸಿಕ ಸ್ಥಳಗಳ ಬಗ್ಗೆ ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸುವುದರ ಜತೆಗೆ ಬೂದನೂರು ಉತ್ಸವದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳ್ಳಲು ಮಕ್ಕಳಿಗೆ ಅವಕಾಶವನ್ನು ಕಲ್ಪಿಸಿದೆ. ಇದನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆ ಇರುವುದರಿಂದ ಮಕ್ಕಳು ಆರೋಗ್ಯದ ಕಡೆ ಗಮನಹರಿಸಿಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ತಾಪಂ ಇಒ ಲೋಕೇಶ್‌ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವ, ಸೌಭಾಗ್ಯಾ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಪಿಡಿಒ ಸ್ವಾಮಿ ಇತರರಿದ್ದರು.

ಫಲಿತಾಂಶ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿ

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮತ್ತು ಮಂಡ್ಯವನ್ನು ರಾಜ್ಯದಲ್ಲೇ ಅಗ್ರಸ್ಥಾನಕ್ಕೆ ಏರಿಸಲು ಜಿಲ್ಲಾಡಳಿತ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಕರೆ ನೀಡಿದರು.
ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರಲ್ಲದೆ, ಈ ಬಾರಿ ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಬರಬೇಕು. ಅದಕ್ಕಾಗಿ ಈಗಿನಿಂದಲೇ ಶ್ರಮಹಾಕಿ ಎಂಬುದಾಗಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 83 ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದ್ದು, ಅವರಲ್ಲಿ 33 ಸಾವಿರದಷ್ಟು ವಿದ್ಯಾರ್ಥಿಗಳು ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಪಿಯುಸಿಯಲ್ಲೂ 70 ಸಾವಿರ ವಿದ್ಯಾರ್ಥಿಗಳಲ್ಲಿ 13,600 ಮಕ್ಕಳು ಇಂಗ್ಲಿಷ್ ಹಾಗೂ ಗಣಿತದಲ್ಲೇ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ಬಾರಿ ಜಿಲ್ಲೆಯು ಶೇ.69ರಷ್ಟು ಫಲಿತಾಂಶದೊಂದಿಗೆ 12ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಈ ಬಾರಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಪಾಲಕರೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿ ಜ್ಞ್ಞಾನದ ಮಟ್ಟವನ್ನು ಹೆಚ್ಚಿಸಬೇಕು ಎಂದು ನಿರ್ದೇಶನ ನೀಡಿದರು.
ಶಾಸಕ ರವಿಕುಮಾರ್ ಕಾರ್ಯವೈಖರಿಗೆ ಮೆಚ್ಚುಗೆ: ಬೂದನೂರಿನ ಕಾಶಿ ವಿಶ್ವನಾಥ ದೇವಾಲಯವು 12ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪದ ಅದ್ಭುತ ಕುರುಹಾಗಿದೆ. ಹೊಯ್ಸಳರು ನಿರ್ಮಿಸಿದ ಈ ಸುಂದರ ಕ್ಷೇತ್ರದಲ್ಲಿ ಇಂದಿಗೂ ಪೂಜೆ-ಪುನಸ್ಕಾರಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ಉತ್ಸವ ಆಯೋಜಿಸಿರುವುದು ಈ ಭಾಗದ ಸಂಸ್ಕೃತಿಯನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗಿದೆ. ಇಲ್ಲಿ ಮಕ್ಕಳಿಗಾಗಿ ಇಂತಹ ಅದ್ಭುತ ಕಾರ್ಯಕ್ರಮವನ್ನು ರವಿ ಗಣಿಗ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net