ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಮಂಡ್ಯದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ

ಮಂಡ್ಯ:

ನೀರು ಪ್ರಕೃತಿಯ ಅಮೂಲ್ಯ ಸಂಪತ್ತಾಗಿದ್ದು, ಪ್ರತಿಯೊಬ್ಬರೂ ಅದನ್ನು ಮಿತವಾಗಿ ಬಳಸಿ ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಅಂತರ್ಜಲ ನಿರ್ದೇಶನಾಲಯ ಬೆಂಗಳೂರು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಅಂತರ್ಜಲ ಕಚೇರಿ ಸಹಯೋಗದಲ್ಲಿ ನಮ್ಮ ಭೂಮಿ ನಮ್ಮ ನೀರು, ನಮ್ಮ ಶಕ್ತಿ ಕಾರ್ಯಕ್ರಮದಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ, ಕೊಳ ಹಾಗೂ ಜಲಮೂಲಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ನೀರಿನ ಮಹತ್ವವನ್ನು ಅರಿತು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಹಾಗೂ ನೀರಿನ ಉಳಿತಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೀರು ಜೀವದ ಮೂಲವಾಗಿದ್ದು, ಅದರ ಸಂರಕ್ಷಣೆ ಪ್ರತಿ ನಾಗರಿಕನ ಜವಾಬ್ದಾರಿಯಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಮಳೆನೀರು ಕೊಯ್ಲು, ಕೆರೆಗಳ ಪುನರುಜ್ಜೀವನ, ಮರಗಳ ನೆಡುವಿಕೆ ಹಾಗೂ ಅನಗತ್ಯವಾಗಿ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದನ್ನು ನಿಯಂತ್ರಿಸುವಂತಹ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಪ್ರಕೃತಿಯನ್ನು ಪ್ರೀತಿಸುವ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಅರಿವು ಬೆಳೆಸುವ ಉದ್ದೇಶದಿಂದ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಪರಿಸರ ಕಾಳಜಿ ಮತ್ತು ನೀರಿನ ಸಂರಕ್ಷಣೆಯ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿವೆ. ಜಲಮೂಲಗಳ ಸಂರಕ್ಷಣೆ, ಮರಗಳ ಬೆಳವಣಿಗೆ ಹಾಗೂ ನೀರಿನ ಮಿತ ಬಳಕೆಯ ಮೂಲಕವೇ ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತದೆ. ಇಂದಿನ ನೀರಿನ ಸಂರಕ್ಷಣೆಯೇ ನಾಳಿನ ಬದುಕಿನ ಭದ್ರತೆ ಎಂಬ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಭೂಮಿಯ ಶೇ.75ರಷ್ಟು ಭಾಗ ನೀರಿನಿಂದ ಆವರಿಸಿಕೊಂಡಿದ್ದರೂ, ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಿ, ಮಳೆನೀರು ಸಂಗ್ರಹ ಹಾಗೂ ಅಂತರ್ಜಲ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಪ್ರಕೃತಿಯಲ್ಲಿ ಪ್ರತಿಯೊಬ್ಬರ ಅಗತ್ಯಕ್ಕೆ ಸಾಕಾಗುವಷ್ಟು ಸಂಪನ್ಮೂಲಗಳಿವೆ. ಆದರೆ ದುರುಪಯೋಗಕ್ಕೆ ಅವಕಾಶವಿಲ್ಲ. ನೀರು ಪೋಲಾಗದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಹನಿ ನೀರಿನ ಮಹತ್ವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ. ಪ್ರತಿಯೊಂದು ಹನಿ ನೀರನ್ನು ಕಾಪಾಡುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ನೀರಿನ ಭದ್ರತೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಿರಿಯ ಭೂ ವಿಜ್ಞಾನಿ ರಾಜಶ್ರೀ, ಶಿಕ್ಷಣ ಇಲಾಖೆ ಅಧಿಕಾರಿ ವಿಜಯಕುಮಾರ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಂತರ್ಜಲ ಸಂರಕ್ಷಣೆ ಕುರಿತು ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿ, ಪರಿಸರ ಮತ್ತು ಜಲ ಸಂರಕ್ಷಣೆಯ ಬಗ್ಗೆ ಇದೇ ರೀತಿಯ ಜಾಗೃತಿ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ವಿಜೇತರಿಗೆ ಬಹುಮಾನ ವಿತರಣೆ
ಸ್ಪರ್ಧೆಯಲ್ಲಿ ವಿಜೇತರಾದ ಮದ್ದೂರು ತಾಲೂಕಿನ ಬೊಪ್ಪ ಸಮುದ್ರ ಸರ್ಕಾರಿ ಪ್ರೌಢಶಾಲೆಯ ಎಚ್.ಬಿ.ವಿಷ್ಣುಪ್ರಸಾದ್(ಪ್ರ), ಶ್ರೀರಂಗಪಟ್ಟಣ ತಾಲೂಕು ನಗುವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಭಾರ್ಗವಿ(ದ್ವಿ) ಮತ್ತು ಪಾಂಡವಪುರ ತಾಲೂಕು ಚಿನಕುರಳಿ ಪಬ್ಲಿಕ್ ಸ್ಕೂಲ್ನ ಎಚ್.ಎ.ಅರ್ಜುನ್‌ಗೌಡ(ತೃ) ಬಹುಮಾನವನ್ನು ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net