ವೈರಮುಡಿ ಉತ್ಸವಕ್ಕೆ 1,500 ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಭದ್ರತೆಯ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಭದ್ರತೆಯ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • 1,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
  • ವಿಶ್ವಪ್ರಸಿದ್ಧ ವೈರಮುಡಿ ಉತ್ಸವ
ಮೇಲುಕೋಟೆ: ವಿಶ್ವಪ್ರಸಿದ್ಧ ವೈರಮುಡಿ ಉತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಯಾವುದೇ ಲೋಪವಾಗಬಾರದೆಂಬ ಕಾರಣಕ್ಕೆ 1,500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರೊಂದಿಗೆ ಗುರುವಾರ ಮೇಲುಕೋಟೆಗೆ ಭೇಟಿ ನೀಡಿ ಪಾರ್ಕಿಂಗ್ ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರ ನೇತೃತ್ವದಲ್ಲಿ ವೈರಮುಡಿ ಕಿರೀಟಧಾರಣೆ ಮಹೋತ್ಸವಕ್ಕೆ ಭದ್ರತೆ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ 1500 ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಉತ್ಸವವನ್ನು ಶಾಂತಿಯುತ, ಭಕ್ತಸ್ನೇಹಿಯಾಗಿ ನಡೆಸಲಾಗುತ್ತದೆ ಎಂದರು.
ಇದೇ ವೇಳೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಉತ್ಸವ ಆರಂಭವಾಗುವ ಸ್ಥಳ ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ವೈರಮುಡಿ ಉತ್ಸವ, ಮಹಾಮಂಗಳಾರತಿ ನಡೆಯುವ ಸ್ಥಳದಲ್ಲಿ ಉಂಟಾಗುವ ನೂಕಾಟ ನಿಯಂತ್ರಿಸಬೇಕು. ಉತ್ಸವ ಬೀದಿಗಳಲ್ಲೂ ತಳ್ಳಾಟವಾಗದಂತೆ ಎಚ್ಚರವಹಿಸುವ ಮೂಲಕ ಮಹಿಳಾ ಭಕ್ತರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೊಲೀಸ್ ಇಲಾಖೆ ವತಿಯಿಂದ 100ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗುತ್ತಿದೆ. 14 ಕಡೆ ದ್ವಿಚಕ್ರ ವಾಹನಗಳ ಪಾರ್ಕಿಂಗ್, 12 ಕಡೆ ಕಾರ್ ಪಾರ್ಕಿಂಗ್ ಸೇರಿದಂತೆ 35 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಪಾರ್ಕಿಂಗ್ ಕಡೆಗಳಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಮೇಲುಕೋಟೆಯ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭಕ್ತರು ಯಾವುದೇ ನೂಕು ನುಗ್ಗಲಿಲ್ಲದೆ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಮೇಲುಕೋಟೆಯ ಸುತ್ತಮುತ್ತ ಖಾಸಗಿ ಬ್ಯಾನರ್ ಅಳವಡಿಕೆ ಮತ್ತು ಮದ್ಯಮಾರಾಟ ನಿಷೇದಿಸಲಾಗಿದೆ. ವೈರಮುಡಿ ದಿನ ಹಾಗೂ ಬ್ರಹ್ಮೋತ್ಸವದ ದಿನಗಳಲ್ಲಿ ಉತ್ಸವ ಬೀದಿಗಳಲ್ಲಿ ವಾಹನ ನಿಲುಗಡೆಯನ್ನು ನಿಯಂತ್ರಿಸಲು ಮೇಲುಕೋಟೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಶ್ರೀರಂಗಪಟ್ಟಣ ಡಿವೈಎಸ್‌ಪಿ ಯು.ಡಿ.ಕೃಷ್ಣಕುಮಾರ್, ಪಾಂಡವಪುರ ಸರ್ಕಲ್ ಇನ್‌ಸ್ಪೆಕ್ಟರ್ ಶರತ್‌ಕುಮಾರ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಕೀಲ ಕಾಡೇನಹಳ್ಳಿ ಸತೀಶ್ ಕುಮಾರ್, ದೇವಾಲಯದ ಸಿಬ್ಬಂದಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net