ಸಮುದಾಯ ಸಂಪನ್ಮೂಲ ವ್ಯಕ್ತಿ(ಕೃಷಿ ಸಖಿ, ಪಶು ಸಖಿ ಇತರೆ ಸಿಆರ್‌ಪಿ) ಭಾಗಿ
ಮಂಡ್ಯ:
ಎಲ್ ನಿನೋ ಪರಿಣಾಮದಿಂದ ಮುಂಗಾರು ಕ್ಷೀಣಿಸಿದೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಕೆಗೆ ರೈತರನ್ನು ಪ್ರೇರೇಪಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸೂಚನೆ ನೀಡಿದರು.
ತಾಲೂಕಿನ ವಿ.ಸಿ ಫಾರಂನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಆಯ್ಕೆಯಾಗಿರುವ ಸಮುದಾಯ ಸಂಪನ್ಮೂಲ ವ್ಯಕ್ತಿ(ಕೃಷಿ ಸಖಿ, ಪಶು ಸಖಿ ಇತರೆ ಸಿಆರ್‌ಪಿ) ಐದು ದಿನದ ಸಾಂಸ್ಥಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕ್ಷೀಣಿಸಿದೆ. ಕೃಷಿ ತ್ಯಾಜ್ಯ ಹಾಗೂ ಸ್ಥಳೀಯ ಸಂಪನ್ಮೂಲ ಬಳಸಿ ಜೀವಾಮೃತ, ಬೀಜಾಮೃತ, ಸಾವಯವ ಗೊಬ್ಬರ, ಜೈವಿಕ ಮತ್ತು ಸಸ್ಯಜನ್ಯ ಪರಿಕರಗಳ ಬಳಕೆಗೆ ಹೆಚ್ಚು ಒತ್ತು ನೀಡುವುದು. ಈ ಸಂಬಂಧ ವಿವಿಧ ಸಾವಯವ ಪರಿಕರಗಳನ್ನು ಕಡಿಮೆ ದರದಲ್ಲಿ ರೈತರಿಗೆ ಒದಗಿಸಲು ಅನುವಾಗುವಂತೆ ಜಿಲ್ಲೆಯಲ್ಲಿ ಸ್ಥಾಪನೆಯಾಗುವ 47 ಜೈವಿಕ ಪರಿಕರ ಸಂಪನ್ಮೂಲ ಕೇಂದ್ರಗಳ ಕುರಿತು ರೈತರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಲು ತಿಳಿಸಿದರು.
ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡುವುದು. ದೇಸಿ ಹಾಗೂ ಸಾಂಪ್ರದಾಯಿಕ ತಳಿಗಳು ಹೆಚ್ಚಿನ ರೋಗ ಮತ್ತು ಕೀಟ ನಿರೋಧಕ ಶಕ್ತಿಯನ್ನು ಹೊಂದಿದ್ದು, ಉತ್ತಮ ಪೌಷ್ಟಿಕಾಂಶ, ವಿಶಿಷ್ಟ ಪರಿಮಳ ಹಾಗೂ ಔಷಧ ಗುಣಗಳನ್ನು ಒಳಗೊಂಡಿವೆ. ಇವುಗಳ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸಬೇಕು. ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಪ್ರಮಾಣೀಕರಣ ಪ್ರಕ್ರಿಯೆಯು ಅತ್ಯಂತ ಪ್ರಮುಖವಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸುಸ್ಥಿರ ಆದಾಯಕ್ಕಾಗಿ ಕೃಷಿ ನಂತರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಒಳಗೊಂಡಂತೆ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಂಡು ಸ್ವಂತ ಬ್ರಾೃಂಡ್‌ನಲ್ಲಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿ ಹಲವಾರು ರೈತರು ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿದ್ದು, ಅಂತಹ ರೈತರ ಮಾರ್ಗದರ್ಶನ ಪಡೆಯಲು ತಿಳಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ಕಳೆದ ಸಾಲಿನಲ್ಲಿ ಆಯ್ಕೆ ಮಾಡಲಾಗಿದ್ದ 34 ಗುಚ್ಚಗಳನ್ನು ಈ ಸಾಲಿನಲ್ಲಿಯೂ ಮುಂದುವರೆಸಲಾಗಿದೆ. 2026-27ನೇ ಸಾಲಿನಲ್ಲಿ ಪಾಂಡವಪುರ ತಾಲೂಕಿನಲ್ಲಿ ಹೆಚ್ಚುವರಿ 60 ಗುಚ್ಚ ಸೇರಿದಂತೆ ಜಿಲ್ಲೆಯಲ್ಲಿ 70 ಗುಚ್ಚವನ್ನು ಹೆಚ್ಚುವರಿಯಾಗಿ ನಿಗದಿಪಡಿಸಲಾಗಿದ್ದು, ಪ್ರತಿ ಗುಚ್ಚದಲ್ಲಿ 125 ಎಕರೆ ವಿಸ್ತೀರ್ಣದಂತೆ ಜಿಲ್ಲೆಯಲ್ಲಿ ಒಟ್ಟು 13,000 ಎಕರೆ ಪ್ರದೇಶದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯಡಿ ಪ್ರತೀ ಫಲಾನುಭವಿಗೆ ಗರಿಷ್ಟ 4000 ರೂ ಪ್ರೋತ್ಸಾಹಧನ ನೀಡಲಾಗುವುದು. ಪ್ರಸಕ್ತ ಸಾಲಿನ ಹೆಚ್ಚುವರಿ 70 ಗುಚ್ಚಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿರುವ 140 ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ನೈಸರ್ಗಿಕ ಕೃಷಿ ಅಳವಡಿಕೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಕೃಷಿ ವಿವಿ ಕುಲಸಚಿವೆ ಡಾ.ಪಿ.ಎಸ್.ಫಾತಿಮಾ, ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ, ವಿವಿಯ ಸಂಶೋಧನಾ ನಿರ್ದೇಶಕ ಡಾ.ದೇವಗಿರಿ, ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್, ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ, ಪ್ರಾಧ್ಯಾಪಕ ಡಾ.ಯೋಗಾನಂದ, ಉಪ ಕೃಷಿ ನಿರ್ದೇಶಕಿಯರಾದ ಕೆ.ಮಾಲತಿ, ಕೆ.ಸಿ.ಸುಷ್ಮಾ, ಸಹಾಯಕ ಕೃಷಿ ನಿರ್ದೇಶಕ ಜಿ.ಶ್ರೀಹರ್ಷ ಇತರರಿದ್ದರು.