ಭೂಮಿಯಲ್ಲಿನ ಜೀವಾಣುಗಳನ್ನು ಕಾಪಾಡಿಕೊಳ್ಳಲಿ: ಕನ್ನೇರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಸಲಹೆ

  ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕನ್ನೇರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕನ್ನೇರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾವಯವ ಕೃಷಿ ಕಾರ್ಯಾಗಾರ
  • ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ
ಮಂಡ್ಯ: ರೈತರು ಭೂಮಿಯೊಳಗಿನ ಜೀವಾಣುಗಳನ್ನು ಕಾಪಾಡಿಕೊಳ್ಳಬೇಕು. ನೀರನ್ನು ಭೂಮಿಯೊಳಗೆ ಇಂಗಿಸಿಕೊಳ್ಳುವಂತೆ ಮಾಡಿಕೊಂಡು ಹಸಿರು ಗೊಬ್ಬರ ಹಾಕುವುದನ್ನು ರೂಢಿಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆ ಕನ್ನೇರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಮಳವಳ್ಳಿಯಿಂದ ‘ಅಡಗಲಿ ರಾಸಾಯನಿಕ ಗೊಬ್ಬರ, ಅಮೃತವಾಗಲಿ ಕೊಟ್ಟಿಗೆ ಗೊಬ್ಬರ’ ಘೋಷಣೆಯೊಂದಿಗೆ ಆಯೋಜಿಸಿದ್ದ ಸಾವಯವ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ದೊಡ್ಡ ಅಣೆಕಟ್ಟೆಗಳನ್ನು ಕಟ್ಟುತ್ತೇವೆ. ಆದರೆ ಅದರ ಪ್ರಯೋಜನವಿಲ್ಲ. ಕೇವಲ ಮಣ್ಣಿನಲ್ಲಿಯೇ ಟಿಎಂಸಿ ಲೆಕ್ಕದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಡ್ಯಾಂ ಕಟ್ಟಲು ಹತ್ತು ಪಟ್ಟು ಹಣ ಖರ್ಚು ಮಾಡುತ್ತೇವೆ. ಅದರಲ್ಲಿ ಒಂದು ಪಟ್ಟು ಹಣವನ್ನು ನಾವು ಭೂಮಿಗಾಗಿ ಖರ್ಚು ಮಾಡಿದರೆ ಸಾಕು ನೀರು ಮಣ್ಣಿನಲ್ಲಿಯೇ ಸಂರಕ್ಷಣೆ ಮಾಡಬಹುದು. ಇದು ರೈತರ ಕೆಲಸವೇ ಹೊರತು ಸರ್ಕಾರದ್ದಲ್ಲ ಎಂದು ತಿಳಿಸಿದರು.
ಹೊಲಗಳ ಬದುವಿನಲ್ಲಿ ಗಿಡಗಳು ಇಲ್ಲದಿದ್ದರೆ ಬೆಳೆ ಸಂರಕ್ಷಣೆ ಹಾಗೂ ಬೆಳೆಗಳಿಗೆ ರೋಗದಿಂದ ಮುಕ್ತಿ ಸಿಗುವುದಿಲ್ಲ. ಇದರ ಜತೆಗೆ ಮಣ್ಣಿನ ಆರೋಗ್ಯ ಹಾಗೂ ನೀರಿನ ಲಭ್ಯತೆಗೆ ಅನುಗುಣವಾಗಿ ರಾಸಾಯನಿಕ ಮುಕ್ತ ಬೆಳೆ ಬೆಳೆಯುವ ಕಡೆ ರೈತರು ಹೆಚ್ಚು ಗಮನ ಹರಿಸಬೇಕು. ರೈತರ ಮಿತ್ರ ಕೀಟಗಳು ಎನ್ನುವುದನ್ನು ಮರೆಯಬಾರದು. ಕೀಟ ಸಂತಾನೋತ್ಪತ್ತಿಗೂ ರೈತರು ಒತ್ತು ನೀಡಬೇಕು. ನಮ್ಮ ಹೊಲದ ಹತ್ತು ಪ್ರತಿಶತ ಜಮೀನನ್ನು ಗಿಡಗಳಿಗಾಗಿ ಹಾಗೂ ಎರಡರಿಂದ ಮೂರ ಪ್ರತಿಶತ ಜಮೀನನ್ನು ಜಾನುವಾರುಗಳಿಗೆ ಮೀಸಲಿಡಬೇಕು. ಶೇ.87ರಷ್ಟು ಇಡೀ ಭೂಮಿಯನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದರೆ ಕೇವಲ ಶೇ.13 ರಷ್ಟು ಭೂಮಿಯಲ್ಲಿ ಗಿಡಮರಗಳಿಗಾಗಿ ಇಟ್ಟುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಪಕ್ಷಿಗಳ ಇಕ್ಕೆಯ 10 ಗ್ರಾಂ ಮಲದಲ್ಲಿ ಒಂದು ಟ್ರ್ಯಾಕ್ಟರ್ ಗೊಬ್ಬರದ ಅಂಶವಿರುತ್ತದೆ. ಪಾರಿವಾಳದ ಇಕ್ಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಂಧಕವಿರುತ್ತದೆ. ಇನ್ನುಳಿದ ಪಕ್ಷಿಗಳ ಮಲದಲ್ಲಿ ಹಲವು ಬಗೆಯ ಸಾರಾಂಶಗಳು ಮಲದ ರೂಪದಲ್ಲಿ ಸಿಗಲಿದ್ದು, ಒಂದು ರೀತಿಯಲ್ಲಿ ಇವು ರೈತರ ಮಿತ್ರ ಆಗಿವೆ. ಜಮೀನಿನಲ್ಲಿ ಎರೆಹುಳು ಇದೆ ಎಂದರೆ ಆ ಜಮೀನು ಫಲವತ್ತತೆಯಿಂದ ಕೂಡಿದೆ ಅಥವಾ ಗೆಜ್ಜಲು ಹುಳು ಹಸಿಮರವನ್ನು ತಿನ್ನುತ್ತಿವೆ ಎಂದರೆ ಎಲ್ಲೋ ವ್ಯತ್ಯಾಸ ಅಗಿದೆ ಎಂಬುದನ್ನು ಅರಿತು ಭೂಮಿ ಸತ್ವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕಿ ಎಸ್.ಎಂ.ರಾಜೇಶ್ವರಿ ಮಾತನಾಡಿ, ಮಂಡ್ಯ ಜಿಲ್ಲೆಯು ಹಿರಿಮೆಯನ್ನ ಹೊಂದಿದೆ. 1960 ರಲ್ಲಿ ಶುರುವಾದ ಹಸಿರು ಕ್ರಾಂತಿಗೆ ಕಬ್ಬು, ರಾಗಿ, ಭತ್ತ ಬೆಳೆದ ಮಂಡ್ಯದ ಕೊಡುಗೆ ಅಪಾರವಾಗಿದೆ. ರಾಸಾಯನಿಕವನ್ನು ಭೂಮಿಗೆ ಸೇರಿಸದಷ್ಟೂ ಆಹಾರವೆಲ್ಲವೂ ವಿಷವಾಗುತ್ತದೆ. ಸಿಕ್ಕಿಂ ರಾಜ್ಯದಲ್ಲಿ ಸಾವಯವವು ಸಂಪೂರ್ಣವಾಗಿದೆ. ಕರ್ನಾಟಕದಲ್ಲಿ ಉತ್ತರ ಕರ್ನಾಟಕದಲ್ಲಿ ಸಾವಯವ ಬೆಳೆ ಬೆಳೆಯಲಾಗುತ್ತದೆ. ಅದೇರೀತಿ ಮಂಡ್ಯ ಜಿಲ್ಲೆಯಲ್ಲಿಯೂ ಸಂಪೂರ್ಣ ಸಾವಯವ ಬೆಳೆಬೆಳೆಯುವುದು ಮುಖ್ಯವಾಗಬೇಕು ಎಂದರು.
ಕೇಂದ್ರದ ಕೃಷಿ ಸೌಲಭ್ಯ ತುಂಬಾ ಚೆನ್ನಾಗಿ ಬಳಕೆ ಆಗುತ್ತಿವೆ. ಕರ್ನಾಟಕದಲ್ಲಿ 3 ಲಕ್ಷ ಸ್ವಸಹಾಯ ಸಂಘಗಳು ಇವೆ. ಅದರಲ್ಲಿ 31 ಲಕ್ಷ ಮನೆಗಳನ್ನು ನಾವು ತಲುಪಿದ್ದೇವೆ. ನೋಡಲು ಹಾಗೂ ರೆಡಿಯೋ ಮೂಲಕ ರೈತರ ಯೋಜನೆಗಳನ್ನು ತಿಳಿಸಲಾಗುತ್ತಿದೆ. ಎಲ್ಲರಿಗೂ ಯೋಜನೆಗಳು ತಲುಪಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸಮುದಾಯ ಸಂಪನ್ಮೂಲ 33 ಸಾವಿರ ವ್ಯಕ್ತಿಗಳ ಮೂಲಕ ಕೃಷಿ ಮತ್ತು ಪಶು ಸಖಿಯರಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ಸಂಘ ನೋಂದಣಿ ಆದವರಿಗೆ 1.5 ಲಕ್ಷ ರೂ ಅನುದಾನದ ರೂಪದಲ್ಲಿ ನೀಡಲಾಗುತ್ತಿದೆ. ಇಲ್ಲಿವರೆಗೆ 1,800 ಕೋಟಿ ರೂಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಿದ್ದೇವೆ ಎಂದು ವಿವರಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಸಾವಯವ ಕೃಷಿ ಅಳವಡಿಸಿಕೊಳ್ಳುವುದರಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲಿದೆ. 2003ರಿಂದಲೂ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಡುವ ರೈತರು ಇದ್ದಾರೆ. ಸಾವಯವ ಕೃಷಿ ಮಾರಾಟ ಯಶಸ್ವಿಯಾಗಬೇಕಾದರೆ ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡುವುದು ಹಾಗೂ ಗ್ರಾಹಕರಿಗೆ ನೇರ ಮಾರಾಟ ಮಾಡಬೇಕು. ಒಂದು ಕಾಲದಲ್ಲಿ ಸರ್ಕಾರಿ ಕೆಲಸ ಸಿಕ್ಕರೂ ನೀರಾವರಿ ಮಂಡ್ಯ ಹೆಸರು ಪಡೆದ ರೈತರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿರಲಿಲ್ಲ. ಈಗ ಡಿ ಗ್ರೂಪ್ ಕೆಲಸಕ್ಕೂ ಸಾವಿರಾರು ಅರ್ಜಿ ಹಾಕಲಾಗುತ್ತಿದೆ. ಆದ್ದರಿಂದ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿ ಲಾಭ ಗಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್, ಆದಿಚುಂಚನಗಿರಿ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಭಾಗವಹಿಸಿದ್ದರು.
"

ರೈತರಿಗೆ ಅನುಕೂಲವಾಗಲಿ ಹಾಗೂ ಸಾವಯವ ಕೃಷಿಯಲ್ಲಿ ಮಂಡ್ಯ ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಲು ಸಾವಯಕ ಕೃಷಿ ಬೆಳೆ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರ ಆಯೋಜಿಸಲಾಗಿದೆ. ಸಾವಯವ ಸಮಾಜ ನಿರ್ಮಾಣ ಮಾಡಲು ಹೊರಟಿರುವ ಎಂ.ಎನ್.ಮಹೇಶ್ ಕುಮಾರ್ ಅವರ ಕೆಲಸ ಫಲಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net