ಎಡಮುರಿಯಲ್ಲಿ ಕಿರು ವಿದ್ಯುತ್ ಘಟಕ ಸ್ಥಾಪನೆಗೆ ವಿರೋಧ

ಮಜ್ಜಿಗೆಪುರ-ಬೆಳಗೊಳ ಗ್ರಾಮದ ನಡುವಿನ ಎಡಮುರಿ ಪ್ರವಾಸಿ ತಾಣದ ಬಳಿ ಕಿರು ವಿದ್ಯುತ್ ಘಟಕ ಸ್ಥಾಪನೆ ಮಾಡದಂತೆ ಆಗ್ರಹಿಸಿ ಶುಕ್ರವಾರ ಮಜ್ಜಿಗೆಪುರ, ಬೆಳಗೊಳ, ಹೊಂಗಳ್ಳಿ, ಕೆ.ಆರ್.ಸಾಗರದ ಗ್ರಾಮಸ್ಥರು, ಪರಿಸರವಾದಿಗಳು ಅಧಿಕಾರಿಗಳ ಮುಂದೆ ವಿರೋಧ ವ್ಯಕ್ತಪಡಿಸಿದರು.
ಮಜ್ಜಿಗೆಪುರ-ಬೆಳಗೊಳ ಗ್ರಾಮದ ನಡುವಿನ ಎಡಮುರಿ ಪ್ರವಾಸಿ ತಾಣದ ಬಳಿ ಕಿರು ವಿದ್ಯುತ್ ಘಟಕ ಸ್ಥಾಪನೆ ಮಾಡದಂತೆ ಆಗ್ರಹಿಸಿ ಶುಕ್ರವಾರ ಮಜ್ಜಿಗೆಪುರ, ಬೆಳಗೊಳ, ಹೊಂಗಳ್ಳಿ, ಕೆ.ಆರ್.ಸಾಗರದ ಗ್ರಾಮಸ್ಥರು, ಪರಿಸರವಾದಿಗಳು ಅಧಿಕಾರಿಗಳ ಮುಂದೆ ವಿರೋಧ ವ್ಯಕ್ತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ಮುಂದೆ ಗ್ರಾಮಸ್ಥರ ಆಕ್ರೋಶ
  • ನಿರ್ಮಾಣ ಮಾಡದಂತೆ ಮಜ್ಜಿಗೆಪುರ, ಬೆಳಗೊಳ, ಹೊಂಗಳ್ಳಿ, ಕೆ.ಆರ್.ಸಾಗರ ಜನರ ಆಗ್ರಹ
ಕೆ.ಆರ್.ಸಾಗರ: ಮಜ್ಜಿಗೆಪುರ-ಬೆಳಗೊಳ ಗ್ರಾಮದ ನಡುವೆ ಇರುವ ಎಡಮುರಿ ಪ್ರವಾಸಿ ತಾಣದ ಬಳಿ ಇಂಧನ ಇಲಾಖೆ ನೆರವಿನಿಂದ ಖಾಸಗಿ ಸಂಸ್ಥೆ ಕಿರು ವಿದ್ಯುತ್ ಘಟಕ ಸ್ಥಾಪನೆ ಮಾಡದಂತೆ ಆಗ್ರಹಿಸಿ ಶುಕ್ರವಾರ ಮಜ್ಜಿಗೆಪುರ, ಬೆಳಗೊಳ, ಹೊಂಗಳ್ಳಿ, ಕೆ.ಆರ್.ಸಾಗರದ ಗ್ರಾಮಸ್ಥರು, ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿ ಅಧಿಕಾರಿಗೆ ದೂರು ನೀಡಿದರು.
1996ರಲ್ಲಿ ಇಂಧನ ಇಲಾಖೆಯಿಂದ ಮೈಸೂರು ಮೂಲದ ಖಾಸಗಿ ಸಂಸ್ಥೆಗೆ ಎಡಮುರಿ ಬಳಿಯ ಕಾವೇರಿ ನದಿಯಲ್ಲಿ 0.5 ವ್ಯಾಟ್ ಕಿರು ವಿದ್ಯುತ್ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು, 30 ವರ್ಷದಿಂದ ಸಾರ್ವಜನಿಕರು ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವರ್ಷದ ಹಿಂದೆ ಇಂಧನ ಇಲಾಖೆ ಯೋಜನೆಯನ್ನು ಸ್ಥಗಿತಗೊಳಿಸಿ ಆದೇಶ ಮಾಡಿತ್ತು. ಈಗ ಸಂಸ್ಥೆ ಮತ್ತೆ ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಆರ್‌ಐಡಿಎಲ್‌ನ ಪ್ರಭಾರ ಎಜಿಎಂ ರವೀಂದ್ರ ಎಚ್.ಕೋರಿ ಅವರು ಜಾಗ ಪರಿಶೀಲನೆ ಮಾಡಲು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದು ವರದಿ ನೀಡಲು ಬಂದಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಯೋಜನೆಗೆ ಆಕ್ರೋಶ ವ್ಯಕ್ತಪಡಿಸಿದರು.
1996ರಲ್ಲಿ ಅನುಮತಿ ಪಡೆದು ಸಾರ್ವಜನಿಕರ ವಿರೋಧ ನಡುವೆ ಕಾಮಗಾರಿ ಪ್ರಾರಂಭಿಸಿದ ಖಾಸಗಿ ಸಂಸ್ಥೆ, ನಂತರ ಯೋಜನೆ ಸ್ಥಗಿತ ಮಾಡಿದ ಇಂಧನ ಇಲಾಖೆ, ಈಗ ಮತ್ತೆ ಅನುಮತಿ ನೀಡುವುದು ಎಷ್ಟು ಸರಿ. ಎಡಮುರಿ ನೈಸರ್ಗಿಕ ಪ್ರವಾಸಿ ತಾಣವಾಗಿದೆ. ಇಲ್ಲಿ ಅನೇಕ ಪಕ್ಷಿ ಸಂಕುಲಗಳಿವೆ. ಮೈಸೂರು ವಲಯದ ಅರಣ್ಯ ಇಲಾಖೆಯಿಂದ ಪ್ರಾಣಿ ಸಂಕುಲದ ಜಾಗ ಎಂದು ಗುರುತಿಸಲಾಗಿದ್ದು, ಇಲ್ಲಿ ಯಾವುದೇ ರೀತಿಯ ಜಲ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಮಾಡದಂತೆ ಪರಿಸರ ಇಲಾಖೆ ಗುರುತಿಸಿದೆ ಎಂದು ಹೇಳಿದರು.
ಕೆಆರ್‌ಐಡಿಎಲ್‌ನ ಪ್ರಭಾರ ಎಜಿಎಂ ರವೀಂದ್ರ ಎಚ್.ಕೋರಿ ಮಾತನಾಡಿ, ಖಾಸಗಿ ಸಂಸ್ಥೆ ಮತ್ತೆ ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಹಾಗೂ ಸ್ಥಳ ಪರಿಶೀಲನೆ ಮಾಡಲು ಬಂದಿದ್ದು, ಇಲ್ಲಿನ ವಾಸ್ತವ ಸ್ಥಿತಿ ಮತ್ತು ನಿಮ್ಮ ದೂರನ್ನು ಇಲಾಖೆ ಹಿರಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸ್ಥಳಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆ.ಆರ್.ಸಾಗರ ಗ್ರಾ.ಪಂ. ಮಾಜಿ ಅಧ್ಯಕ್ಷ ನಾಗೇಂದ್ರ ಕುಮಾರ್ ಮಾತನಾಡಿ, ಎಡಮುರಿ ಪ್ರವಾಸಿ ತಾಣ ಪ್ರಕೃತಿದತ್ತವಾಗಿದೆ. ಇದನ್ನು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕುಡಿಯುವ ನೀರು, ರೈತರ ಬೆಳೆಗಳಿಗೊಸ್ಕರ ಇಲ್ಲಿನ ಪರಿಸರ ಉಳಿಸಿ ನಾಲೆ ನಿರ್ಮಿಸಿದ್ದಾರೆ. ನಿತ್ಯ ಸಾವರಾರು ಪ್ರವಾಸಿಗರು ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿದ್ದಾರೆ. ವಿದ್ಯುತ್ ಘಟಕ ಯೋಜನೆಯಿಂದ ಇಲ್ಲಿನ ಗ್ರಾಮಸ್ಥರು ಸೇರಿದಂತೆ ಪ್ರವಾಸಿಗರಿಗೆ ತೊಂದರೆ ಆಗಲಿದೆ ಎಂದರು.
ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಈ ಯೋಜನೆಗೆ ಇಂಧನ ಇಲಾಖೆ ಅನುಮತಿ ನೀಡಿದರೆ ಹೋರಾಟ ತೀವ್ರಗೊಳಿಸಲಾಗುತ್ತದೆ. ಎಡಮುರಿ ಪ್ರವಾಸಿ ತಾಣ ಉಳಿಸಿ ಎಂಬುದೇ ನಮ್ಮ ಧ್ಯೇಯವಾಗಿದೆ ಎಂದು ಅಧಿಕಾರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಇಂಧನ ಇಲಾಖೆ ಕೆಆರ್‌ಇಡಿಎಲ್‌ನ ಪ್ರಭಾರ ಎಜಿಎಂ. ರವೀಂದ್ರ ಎಚ್.ಕೋರಿ ಗ್ರಾಮಸ್ಥರ ಜತೆ ಸಭೆ ನಡೆಸಿ ಮಾಹಿತಿ ಪಡೆದರು. ಮಜ್ಜಿಗೆಪುರ ಗ್ರಾ.ಪಂ. ಮಾಜಿ ಸದಸ್ಯ ಮಂಜುನಾಥ್, ಕೆ.ಆರ್.ಸಾಗರ ಗ್ರಾ.ಪಂ. ಮಾಜಿ ಅಧಕ್ಷ ನಾಗೇಂದ್ರ ಕುಮಾರ್, ನರಸಿಂಹ, ಮಾಜಿ ಉಪಾಧ್ಯಕ್ಷ ಪಿ.ರಾಜು, ಮಜ್ಜಿಗೆಪುರ ಗ್ರಾ.ಪಂ. ಮಾಜಿ ಸದಸ್ಯ ಪ್ರಭಾ, ಬೆಳಗೊಳ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜುನಾಥ್, ಮಜ್ಜಿಗೆಪುರದ ಪುಟ್ಟೇಗೌಡ, ಭಾರ್ಗವ, ದಿನೇಶ್, ನಿಕಿಲ್‌ಪುಟ್ಟೇಗೌಡ, ರವಿಶಾಸ್ತ್ರಿ, ವೈರುಮುಡಿ, ಭೈರ, ವೀರಣ್ಣ, ಗಣೇಶ್ ಹೊಸಉಂಡವಾಡಿ ಸಂಜು, ನಂಜುಂಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net