ಸೋಲಾರ್ ಪ್ಲಾಂಟ್ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸುವುದು ಸಲ್ಲ

ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಎಸ್‌ಇಪಿ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಪಿಡಿಒ ಮಹೇಶ್‌ಕುಮಾರ್, ಅಶ್ವತ್ಥ್ ಇತರರು ಇದ್ದರು.
ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಎಸ್‌ಇಪಿ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿಪೂಜೆ ನೆರವೇರಿಸಿದರು. ಪಿಡಿಒ ಮಹೇಶ್‌ಕುಮಾರ್, ಅಶ್ವತ್ಥ್ ಇತರರು ಇದ್ದರು.
Published on

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಪಾಂಡವಪುರ: ತಾಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ರೈತರ ಅನುಕೂಲಕ್ಕಾಗಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಎಸ್‌ಇಪಿ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ತಾಲೂಕಿನ ಕನಗನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲಾಗುತ್ತಿದೆ. ಪಿಎಂ ಕುಸುಮ್ ಯೋಜನೆಯ ಅಧಿಕಾರಿಗಳು ಯೋಜನೆಗೆ ಅಗತ್ಯವಿರುವ ಜಾಗವನ್ನು ಗುರುತಿಸಿದ್ದಾರೆ. ಇದಕ್ಕೆ ಸ್ಥಳೀಯರು ಕೂಡ ಸಮ್ಮತಿ ಸೂಚಿಸಿ ನಿಗದಿಯಾಗಿರುವ ಸ್ಥಳದಲ್ಲೇ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಾಮಗಾರಿ ಭೂಮಿಪೂಜೆ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಕಾರ್ಯಕ್ರಮಕ್ಕೆ ತಾಪಂ ಇಒ, ತಹಸೀಲ್ದಾರ್, ಪಿಡಿಒ, ಸೆಸ್ಕ್ ಮತ್ತು ಕುಸುಮ್ ಯೋಜನೆ ಅಧಿಕಾರಿಗಳನ್ನು ಒಳಗೊಂಡಂತೆ ಎಲ್ಲರೂ ಬಂದಿದ್ದರು. ಕಾರ್ಯಕ್ರಮದ ಬಗ್ಗೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರಿಗೆ ಪಿಡಿಒ ಮಾಹಿತಿ ನೀಡಿರುತ್ತಾರೆ ಎಂದು ಭಾವಿಸಿದ್ದೆ. ಅವರು ಮಾಹಿತಿ ಕೊಟ್ಟಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿದ್ಯುತ್ ಉಪ ಕೇಂದ್ರಕ್ಕೆ ಜಾಗ ಗುರುತು: ತಾಲೂಕಿನ ಕ್ಯಾತನಹಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲು ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಸಮೀಪ ಜಾಗ ಗುರುತಿಸಲಾಗಿದೆ. ಇದಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಂತೆ ಸರ್ಕಾರ ಅಗತ್ಯವಿರುವ ಹಣ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿ ಜಾಗಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ ಮಂಜೂರು ಮಾಡಿಕೊಟ್ಟಿದ್ದಾರೆ. ಯಾರಿಗಾದರೂ ಈ ಬಗ್ಗೆ ಅನುಮಾನವಿದ್ದರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಪಿಡಿಒ ಮಹೇಶ್‌ಕುಮಾರ್, ಬಿಲ್ ಕಲೆಕ್ಟರ್ ರಾಜು, ಗುತ್ತಿಗೆದಾರ ಬಸವೇಗೌಡ, ಗ್ರಾಮಸ್ಥರಾದ ಅಶ್ವತ್ಥ್, ಜವರಪ್ಪ, ಸಿದ್ದು, ಹಿರೇಮರಳಿ ಶಿವಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net