

ಮದ್ದೂರು: ಪಟ್ಟಣದ ಸಿದ್ದಾರ್ಥನಗರದ ಬಳಿ ಸೋಮವಾರ ರಾತ್ರಿ ಯುವಕನನ್ನು ಮಾರಕಾಸ್ತ್ರದಿಂದ ಇರಿದು ಕೊಲೆ ಮಾಡಲಾಗಿದೆ.ನಗರದ ತಮಿಳು ಕಾಲನಿ ನಿವಾಸಿ ನಂದನ್ (25) ಕೊಲೆಯಾದ ಯುವಕ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನಂದನ್ ತನ್ನ ಮನೆಯ ಟೈಲ್ಸ್ ಕೆಲಸ ಮಾಡಿಕೊಡಲು ಪುಟ್ಟಸ್ವಾಮಿ ಹಾಗೂ ಆತನ ಮೂವರು ಪುತ್ರರಾದ ಶಿವರಾಜು, ನಿಖಿಲ್ ಹಾಗೂ ಧನುಶ್ ಅವರಿಗೆ 6500 ರೂ. ಹಣ ನೀಡದ್ದ ಎನ್ನಲಾಗಿದೆ. ಹಣ ಪಡೆದು ಹಲವು ದಿನಗಳಾದರೂ ಟೈಲ್ಸ್ ಕೆಲಸವನ್ನು ಮಾಡಿಕೊಡದೆ ಹಾಗೂ ಮುಂಗಡ ಹಣವನ್ನೂ ವಾಪಸ್ ನೀಡದ ಪರಿಣಾಮ ನಂದನ್ ಕುಪಿತಗೊಂಡಿದ್ದ. ಈ ನಡುವೆ ಹಣ ಕೇಳಲು ಪುಟ್ಟಸ್ವಾಮಿ ಅವರ ಬಳಿಗೆ ಹೋದಾಗ ರಸ್ತೆಯಲ್ಲಿಯೇ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಈ ವೇಳೆ ಪುಟ್ಟಸ್ವಾಮಿ ಹಾಗೂ ಆತನ ಮೂವರು ಮಕ್ಕಳು ನಂದನ್ ಮೇಲೆ ಹಲ್ಲೆ ಮಾಡಿದರು ಎಂದು ತಿಳಿದು ಬಂದಿದೆ.
ನಂತರ ಪುಟ್ಟಸ್ವಾಮಿ ಅವರ ಮಗನಾದ ಶಿವರಾಜು ಹರಿತವಾದ ಡ್ಯಾಗರ್ನಿಂದ ನಂದನ್ ಕುತ್ತಿಗೆ ಭಾಗಕ್ಕೆ ಬಲವಾಗಿ ಇರಿದ ಪರಿಣಾಮ ಆತ ಕುಸಿದು ಬಿದ್ದ ಎನ್ನಲಾಗಿದೆ. ಕೂಡಲೇ ಸ್ಥಳಿಯರು ನಂದನ್ನನ್ನು ನಗರದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ, ಸಿಪಿಐ ನವೀನ್ ಕುಮಾರ್ ಆಗಮಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.