ರಾಜ್ಯ ಸರ್ಕಾರದಿಂದ ಸಿಗುತ್ತಿಲ್ಲ ಅನುದಾನ

ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ ಜನಸಂಪರ್ಕ ಸಭೆಯಲ್ಲಿ ಶಾಸಕ ಎಚ್.ಟಿ. ಮಂಜು ಮಾತನಾಡಿದರು. ಯು.ಆರ್. ಅಶೋಕ್, ಸುಷ್ಮಾ, ಹರೀಶ್, ವೈ.ಕೆ. ತಿಮ್ಮೇಗೌಡ ಮತ್ತಿತರರಿದ್ದರು.
ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ ಜನಸಂಪರ್ಕ ಸಭೆಯಲ್ಲಿ ಶಾಸಕ ಎಚ್.ಟಿ. ಮಂಜು ಮಾತನಾಡಿದರು. ಯು.ಆರ್. ಅಶೋಕ್, ಸುಷ್ಮಾ, ಹರೀಶ್, ವೈ.ಕೆ. ತಿಮ್ಮೇಗೌಡ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಟಿ. ಮಂಜು ಬೇಸರ
ಕಿಕ್ಕೇರಿ : ಜನತೆ ಸಮಸ್ಯೆಗಳಿಗೆ ಸ್ಪಂದಿಸುವುದೇ ತನ್ನ ಕರ್ತವ್ಯ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.
ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ಬುಧವಾರ ಜರುಗಿದ ಮಾದಾಪುರ ಗ್ರಾಮ ಪಂಚಾಯಿತಿ ಮಟ್ಟದ ಜನಸಂಪರ್ಕ ಹಾಗೂ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿರಕ ಅಹವಾಲು ಸ್ವೀಕರಿಸಿ ಮಾತನಾಡಿದರು.
ಗ್ರಾಮದ ಗೋಮಾಳದಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಭೂ ಮಂಜೂರು, ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಪ್ರಾಮಾಣಿಕವಾಗಿ ಯತ್ನಿಸಿರುವೆ. ಮನೆಯ ಹಬ್ಬದಂತೆ ಸರ್ಕಾರಿ ಸಭೆಯನ್ನು ಗ್ರಾಮಸ್ಥರು ಹಮ್ಮಿಕೊಂಡಿರುವುದು ಸಂತಸವಾಗಿದೆ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಸಿಗುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಅನುದಾನ ನೀಡಿದರೆ, ವಿರೋಧ ಪಕ್ಷದ ಶಾಸಕರಿಗೆ 10-20 ಕೋಟಿ ರೂ. ಅನುದಾನ ನೀಡಲು ಸತಾಯಿಸುತ್ತಾರೆ. ಅನುದಾನಕ್ಕೆ ಹೋರಾಟ ಮಾಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ. ಗ್ರಾಮದಲ್ಲಿ 1600 ಪೌತಿ ಖಾತೆಗಳಿದ್ದು ತ್ವರಿತವಾಗಿ ಸರಿಪಡಿಸಿ ದುರಸ್ಥಿ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಧಿಕಾರಿಗಳು ನಾಗರಿಕರನ್ನು ಸುಮ್ಮನೆ ಅಲೆದಾಡಿಸದೆ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಖಡಕ್ ಸೂಚನೆ ನೀಡಿದರು.
ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕೃಷಿ ಯಂತ್ರೋಪಕರಣ, ಹರಿಗೋಲು, ದೋಣಿ, ಮೇವು ಕಟಾವು ಯಂತ್ರ, ಟ್ರಾೃಕ್ಟರ್, ಕೊಳವೆಬಾವಿ ಮೋಟಾರ್, ಪೈಪ್ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಇಲಾಖೆಯ ಇ-ಸ್ವತ್ತು, ಕಂದಾಯ ಇಲಾಖೆಯ ಪೌತಿ ಖಾತೆ ದಾಖಲೆ, ವಿಧವಾ ವೇತನ, ವೃದ್ಧಾಪ್ಯ ವೇತನ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ತಹಸೀಲ್ದಾರ್ ಎಸ್.ಯು. ಅಶೋಕ್, ತಾಪಂ ಇಒ ಸುಷ್ಮಾ, ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ಬಿಇಒ ವೈ.ಕೆ. ತಿಮ್ಮೇಗೌಡ, ಪಿಡಿಒ ಚಂದ್ರು, ಗ್ರಾಮದ ಮುಖಂಡರು, ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net