ನಿರ್ಮಾಣಗೊಂಡ ಶೌಚಗೃಹಕ್ಕಿಲ್ಲ ಉದ್ಘಾಟನಾ ಭಾಗ್ಯ

ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಉದ್ಘಾಟನಾ ಭಾಗ್ಯ ಕಾಣದಿರುವ ಶೌಚಗೃಹ.
ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಉದ್ಘಾಟನಾ ಭಾಗ್ಯ ಕಾಣದಿರುವ ಶೌಚಗೃಹ.
Published on

ಪ್ರಮುಖ ಮುಖ್ಯಾಂಶಗಳು

  • ಪಟ್ಟಣದ ಸಾರಿಗೆ ಬಸ್ ನಿಲ್ದಾಣ
  • ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳೂ ಕಳೆದರೂ ದುರಸ್ತಿಗೊಳಿಸದಿರುವ ಪುರಸಭೆ
ಮಳವಳ್ಳಿ: ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಉದ್ಘಾಟನಾ ಭಾಗ್ಯ ಕಾಣದ ಸಾರ್ವಜನಿಕ ಶೌಚಗೃಹ ಹಾಗೂ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳೂ ಕಳೆದರೂ ದುರಸ್ತಿಗೊಳಿಸದಿರುವ ಪುರಸಭೆ ಆಡಳಿತಕ್ಕೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಸ್ವಚ್ಛ ಸರ್ವೇಕ್ಷಣ್ ಯೋಜನೆಯಡಿಯಲ್ಲಿ ವಿವಿಧ ಸಂಸ್ಥೆಗಳ ಸಹಯೋಗದೊಡನೆ 17 ಲಕ್ಷ ರೂ. ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ಶೌಚಗೃಹ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತು. ಮಂದಗತಿಯಲ್ಲಿ ತೆವಳುತ್ತಾ ಕಳೆದ ನಾಲ್ಕು ತಿಂಗಳ ಹಿಂದೆ ಪೂರ್ಣಗೊಂಡಿರುವ ಶೌಚಗೃಹಕ್ಕೆ ಬೀಗ ಜಡಿಯಲಾಗಿದೆ. ಅಲ್ಲದೇ ಇದಕ್ಕೆ ಹೊಂದಿಕೊಂಡಂತೆ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿಗೆ ಕ್ರಮ ವಹಿಸಿಲ್ಲ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡು ಮಲ-ಮೂತ್ರ ವಿಸರ್ಜನೆಯ ತಾಣವಾಗಿದೆ. ಇಲ್ಲಿನ ದುರ್ವಾಸನೆ, ಅನೈರ್ಮಲ್ಯದಿಂದ ಇಲ್ಲಿಗೆ ಬಂದುಹೋಗುವ ಪ್ರಯಾಣಿಕರು ಹಾಗೂ ಟ್ಯಾಕ್ಸಿ(ಕಾರು) ನಿಲ್ದಾಣದ ಚಾಲಕರು ಮತ್ತು ಸುತ್ತಲಿನ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಸಾಂಕ್ರಾಮಿಕ ರೋಗದ ಭೀತಿ
ಸೊಳ್ಳೆಗಳ ಉತ್ಪತ್ತಿಗೆ ಇದು ತಾಣವಾಗಿದ್ದು, ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೂಡಲೇ ಶೌಚಗೃಹ ಕಾರ್ಯಾರಂಭ ಮಾಡುವಂತೆ ಕ್ರಮವಹಿಸಿ, ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿ ಮಾಡಿಸಿ ಎಂದು ಸ್ಥಳೀಯರು, ಟ್ಯಾಕ್ಸಿ ಚಾಲಕರು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳದ್ದು ಮಾತ್ರ ದಿವ್ಯಮೌನ. ಸ್ವಚ್ಛತೆ ಮತ್ತು ಗಿಡಗಂಟಿಗಳ ತೆರವಿನ ಜತೆಗೆ ಕ್ರಮವಹಿಸಬೇಕಿದ್ದ ಪುರಸಭೆ ಆರೋಗ್ಯಾಧಿಕಾರಿ ಹಾಗೂ ಮುಖ್ಯಾಧಿಕಾರಿ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿವೆ. ಆದರೆ ಇದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಿದ್ದ ಪುರಸಭೆ ಜನರು ಅಶುಚಿತ್ವದ ತಾಣದ ಬಗ್ಗೆ ಮನವಿ ಮಾಡಿಕೊಂಡರೂ ಕಿವಿಗೊಡದಿರುವುದು ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂದು ಪ್ರಜ್ಞಾವಂತರು ಆರೋಪ ಮಾಡುತ್ತಿದ್ದಾರೆ.
ಸಂಪರ್ಕಕ್ಕೆ ಸಿಗದ ಮುಖ್ಯಾಧಿಕಾರಿ: ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಅವರು ಸಮಸ್ಯೆಗಳ ಬಗ್ಗೆ ತಿಳಿಸಲು ಸಾರ್ವಜನಿಕರು ಮಾಡುವ ಯಾವುದೇ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪಗಳಿವೆ. ಇದಕ್ಕೆ ಪೂರಕವೆಂಬಂತೆ ವಿಜಯವಾಣಿ ಮಾಹಿತಿ ಪಡೆಯಲು ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಮಾಹಿತಿಗಾಗಿ ತೆರಳಿ ವಿಚಾರಿಸಿದರೆ ಮೇಡಂ ಮೀಟಿಂಗ್ ಗೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ. ಜನರ ಆಕ್ರೋಶಕ್ಕೆ ಗುರಿಯಾಗುವ ಮೊದಲು ಪುರಸಭೆ ಆಡಳಿತ ಸೂಕ್ತ ಕ್ರಮ ವಹಿಸುವುದೆ ಎಂದು ಕಾದು ನೋಡಬೇಕಿದೆ.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ಶೌಚಗೃಹ ಬಳಿ ತಕ್ಷಣವೇ ಸ್ವಚ್ಛತಾ ಕಾರ್ಯಮಾಡಿಸಲಾಗುವುದು. ಶೌಚಗೃಹ ಉದ್ಘಾಟನೆ ಆಗದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ.
ಪ್ರಕಾಶ್, ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ
ಕಾಮಗಾರಿ ಪೂರ್ಣಗೊಂಡಿರುವ ಶೌಚಗೃಹಕ್ಕೆ ಬೀಗ ಹಾಕಿರುವುದರಿಂದ ಶೌಚಗೃಹದ ಸುತ್ತಲೂ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಸುತ್ತಲಿನ ಪ್ರದೇಶ ಗಬ್ಬು ನಾರುತ್ತಿದ್ದು, ಕಾರುಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿ ಎದುರಿನಲ್ಲಿರುವ ಅಂಗಡಿಗಳ ಬಳಿ ಕೂರುವಂತಾಗಿದೆ. ಶೌಚಗೃಹ ಬೀಗ ತೆರೆದು ಸಾರ್ವಜನಿಕ ಬಳಕೆ ಅನುವು ಮಾಡಿಕೊಟ್ಟರೆ ನಾವೂ ಸೇರಿದಂತೆ ಸುತ್ತಲಿನ ನಿವಾಸಿಗಳೂ ಸ್ವಚ್ಛತೆ ಕಾಪಾಡಿಕೊಳ್ಳುತ್ತೇವೆ.
ಕೃಷ್ಣಪ್ಪ ಕಾರ್ಯದರ್ಶಿ ಕಾರು ಚಾಲಕರ ಸಂಘ
ಇಲ್ಲಿನ ನಿಲ್ದಾಣದಲ್ಲಿ ಹಲವು ವರ್ಷಗಳಿಂದ ನಾವು ಕಾರು ನಿಲ್ಲಿಸಿಕೊಂಡು ಸಿಗುವ ಬಾಡಿಗೆಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣದ ಒಳಗೆ ಹೋಗಿ ಬರಬೇಕಿತ್ತು. ನಿಲ್ದಾಣಕ್ಕೆ ಹೊಂದಿಕೊಂಡಂತೆ ಶೌಚಗೃಹ ನಿರ್ಮಣಗೊಂಡು ಆರು ತಿಂಗಳು ಕಳೆದರೂ ಬಳಕೆಗೆ ನೀಡದೆ ಬೀಗ ಹಾಕಲಾಗಿದೆ. ಇದರ ಸುತ್ತಲೂ ಜನರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬು ನಾರುತ್ತಿದೆ.
ಜಯಶಂಕರ್ ಕಾರು ಚಾಲಕ
ಎರಡು ವರ್ಷಗಳ ಹಿಂದೆಯೇ ಶೌಚಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿಸಲಾಗಿತ್ತು. ಮಂದಗತಿಯಲ್ಲಿ ಕಾಮಗಾರಿಯನ್ನು ಅಧಿಕಾರಿಗಳಿಗೆ ಒತ್ತಾಯ ಮಾಡಿ ಪೂರ್ಣಗೊಳಿಸಲಾಗಿದೆ. ಕೆಲ ದಿನಗಳಲ್ಲೇ ಶೌಚಗೃಹ ಉದ್ಘಾಟನೆ ಮತ್ತು ಪಕ್ಕದಲ್ಲಿರುವ ನೀರಿನ ಘಟಕ ದುರಸ್ತಿ ಬಗ್ಗೆ ಶಾಸಕರ ಗಮನಕ್ಕೆ ತರಲಾಗುವುದು.
ನೂರುಲ್ಲಾ. ಪುರಸಭೆ ಮಾಜಿ ಸದಸ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net