ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸೋಣ: ಬಸವ ದಳದ ಅಧ್ಯಕ್ಷ ಎಂ.ಗುರುಪ್ರಸಾದ್ ಹೇಳಿಕೆ

ಮಂಡ್ಯದ ಹಳೇಪೇಟೆ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
ಮಂಡ್ಯದ ಹಳೇಪೇಟೆ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಯುವ ದಿನ
  • ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ
  • ಕಸ್ತೂರಿ ಸಿರಿಗನ್ನಡ ವೇದಿಕೆಯಿಂದ ಆಯೋಜನೆ
ಮಂಡ್ಯ: ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು ಅವುಗಳನ್ನು ಪಾಲಿಸಬೇಕು ಎಂದು ಬಸವ ದಳದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ.ಗುರುಪ್ರಸಾದ್ ಕರೆ ನೀಡಿದರು.
ನಗರದ ಹಳೇಪೇಟೆ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ದಿನ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆ ಎಂದು ಘೋಷಣೆ ಮಾಡಲಾಗಿದೆ. ಯುವ ಜನರು ಹಾಗೂ ಮಕ್ಕಳು ತಮ್ಮ ಗುರಿ ಮುಟ್ಟಲು ವಿವೇಕಾನಂದರು ಮೂರು ಅಂಶ ನೀಡಿದ್ದಾರೆ. ಗುರಿ ನಿರ್ದಿಷ್ಟವಾಗಿರಬೇಕು, ಜೀವನ ಸಾಗಿಸುವ ಮಾರ್ಗ ಸನ್ಮಾರ್ಗದಲ್ಲಿರಬೇಕು, ಪಾಲಕರ ಆಶಯದಂತೆ ನಡೆಯಬೇಕು ಎಂಬುದಾಗಿವೆ. ಗುರಿ ಇಲ್ಲದ ಸಾಧನೆ ಮಾಡಲು ಮುಂದಾದರೆ ಪಾಲಕರ ಆಸೆ, ಆಕಾಂಕ್ಷೆಯನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದಾಗಿ ಯುವ ಜನರು ಇಚ್ಛಾಸಕ್ತಿಯೊಂದಿಗೆ ಅಚಲವಾದ ಗುರಿ ಹೊಂದಿರಬೇಕು ಎಂದರು.
ಸಮಯ ಎಂಬುದು ಅತ್ಯಂತ ಮಹತ್ವದ್ದು, ನಾಳೆ ಮಾಡುತ್ತೇನೆ ಎಂಬುದನ್ನು ಬಿಟ್ಟು ಎಂದುಕೊಂಡದ್ದನ್ನು ಇಂದೇ ಮಾಡಿ ಮುಗಿಸಬೇಕು ಎಂಬ ತತ್ವವನ್ನು ಇಂದಿನ ಯುವ ಪೀಳಿಗೆ ಆದರ್ಶವಾಗಿಟ್ಟುಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಮೂಲ ನಾಮ ನರೇಂದ್ರನಾಥ್ ದತ್ತ. ಬಾಲ್ಯದಿಂದಲೂ ಅವರು ಸಾಮಾಜಿಕ ಚಿಂತನೆ ಹೋರಾಟ, ರಾಷ್ಟ್ರಪ್ರೇಮ ಹೊಂದಿದ್ದರು. 1893ರಲ್ಲಿ ಚಿಕಾಗೋದಲ್ಲಿ ಜರುಗಿದ ಸರ್ವಧರ್ಮ ಸಮ್ಮೇಳನದಲ್ಲಿ ಜಗತ್ತು ಬೆರಗಾಗುವ ರೀತಿ ಸಾಮಾಜಿಕವಾಗಿ ಭಾರತೀಯರು ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಎಲ್ಲ ಶಕ್ತಿ ನಿಮ್ಮೊಳಗಿದೆ, ದೌರ್ಬಲ್ಯ ಬಿಟ್ಟುಬಿಡಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಆತ್ಮಸ್ಥೈರ್ಯದ ಮಾತುಗಳನ್ನು ಹೇಳಿದ ಮಹಾಪುರುಷ ಎಂದರು.
ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಚ್.ಸಿ.ಆನಂದ್, ಮೋಹನ್‌ಕುಮಾರ್ ಗೌಡಗೆರೆ ಇತರರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಿವೇಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net