ಕಿಕ್ಕೇರಿ ಕೆಪಿಎಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ತರಬೇತಿ ವಿಭಾಗಕ್ಕೆ ತಾ. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಚಾಲನೆ ನೀಡಿದರು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ರೋಜಾ, ಗಿರೀಶ್, ದೀಪಕ್, ಗಾಗಿನಿ ಮತ್ತಿತರರಿದ್ದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ಹೇಳಿಕೆ
ಕಿಕ್ಕೇರಿ:ವಿದ್ಯಾರ್ಥಿ ದಿಸೆಯಲ್ಲಿ ಓದಿನ ಜತೆಯಾಗಿ ಸ್ವಯಂ ಉದ್ಯೋಗ ಕಲಿಯಲು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಅನುಕೂಲಕರವಾಗಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ. ತಿಮ್ಮೇಗೌಡ ತಿಳಿಸಿದರು.
ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಶಿಕ್ಷಣ ಉದ್ಘಾಟಿಸಿ ಮಾತನಾಡುತ್ತ, ಇದು ಒಂದು ರೀತಿ ವೃತ್ತಿ ಶಿಕ್ಷಣವಾಗಿದೆ. 9ರಿಂದ 12ನೇ ತರಗತಿಯವರೆಗಿನ ಮಕ್ಕಳು ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಶಿಕ್ಷಣದ ತರಬೇತಿ ಪಡೆಯಬಹುದಾಗಿದೆ. ಈ ತರಬೇತಿ ಪಡೆಯುವ ಮಕ್ಕಳಿಗೆ ಹಿಂದಿ ಭಾಷೆ ಶಿಕ್ಷಣದಿಂದ ವಿನಾಯಿತಿ ಇರಲಿದೆ. ವಿದ್ಯಾರ್ಥಿಗಳು ಆತಂಕ ಬಿಟ್ಟು ಓದುವುದನ್ನು ಕಲಿಯಿರಿ ಎಂದರು.
ಹಿಂದಿ ವಿಷಯ ಬೇಡವೆಂದರೆ ಪರ್ಯಾಯವಾಗಿ ಈ ತರಬೇತಿ ಆಯ್ಕೆ ಮಾಡಿಕೊಳ್ಳಿ. ಇದನ್ನು ಕಡ್ಡಾಯವಾಗಿ ಕಲಿಯಬೇಕಿದೆ. ಈ ತರಬೇತಿ ಪಡೆಯುವುದರಿಂದ ಬಟ್ಟೆಗಳ ಮೇಲೆ ವಿವಿಧ ರೀತಿಯ ಕಸೂತಿ ಮಾಡುವುದನ್ನು ಕಲಿಯಬಹುದಾಗಿದೆ. ಕರಕುಶಲ ವಸ್ತುಗಳನ್ನು ಸಿದ್ಧಪಡಿಸುವುದು ಮತ್ತಿತರ ಕೌಶಲತೆಗಳನ್ನು ಶಾಲೆಯಲ್ಲಿ ಕಲಿಯಬಹುದಾಗಿದ್ದು ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಸಾಧ್ಯವಾದಷ್ಟು ಹೆಚ್ಚು ಒಳ್ಳೆಯ ಹವ್ಯಾಸ, ಕೌಶಲತೆ ಕಲಿತರೆ ಭವಿಷ್ಯದಲ್ಲಿ ಉಪಯೋಗವಾಗಲಿದೆ ಎಂದು ಹೇಳಿದರು.
ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿದರು.
ಮಕ್ಕಳು ತಯಾರಿಸಿದ ವಿವಿಧ ರೀತಿಯ ಉಡುಪು, ಚಿತ್ರಕಲೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯತೀಶ್, ಶಿಕ್ಷಕರಾದ ಎಸ್.ಎಂ. ಬಸವರಾಜು, ಎಂ.ಎಚ್. ಕೃಷ್ಣಪ್ಪ, ಗಿರೀಶ್, ದೀಪಕ್, ಚಂದ್ರೇಗೌಡ, ರಾಗಿನಿ, ನಂದಿನಿ, ಲೀಲಾವತಿ, ಶಾಹಿದ್ ರುಜ್ವಿ ಮತ್ತಿತರರಿದ್ದರು.