ಜನರಿಗಾಗಿ ಸಾಹಿತ್ಯ ಬರೆದ ಜಿ.ಎಸ್.ಶಿವರುದ್ರಪ್ಪ: ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮವನ್ನು ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮವನ್ನು ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ೧೦೦ನೇ ಜನ್ಮದಿನಾಚರಣೆ
  • ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಆಯೋಜನೆ
ಮಂಡ್ಯ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರು ಜನಸಾಮಾನ್ಯರಿಗಾಗಿ ಸಾಹಿತ್ಯ ಮಾಲಿಕೆಗಳನ್ನು ಬರೆದವರು ಎಂದು ಕನ್ನಡ ಪರಿಚಾರಕ ಕೆ.ಟಿ.ಹನುಮಂತು ಹೇಳಿದರು.
ನಗರದ ಕೆರೆಯಂಗಳದ ಇಂದಿರಾಗಾಂಧಿ ನರ್ಸಿಂಗ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಸೋಮವಾರ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ 100ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿ.ಎಸ್.ಶಿವರುದ್ರಪ್ಪ ಅವರು ಕೊನೆವರೆಗೂ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಮಹಾಕವಿ ಎಂದು ಶ್ಲಾಘಿಸಿದರು.
ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಪಿ.ಎಚ್‌ಡಿ ಪದವಿಗಾಗಿ ಮಂಡಿಸಿದ ಸೌಂದರ್ಯ ಸಮೀಕ್ಷೆ ಎಂಟು ಬಾರಿ ಮುದ್ರಣಗೊಂಡಿದ್ದು ವಿಶೇಷ. ಅವರ ಬರವಣಿಗೆಯ ಗಟ್ಟಿತನ ಎಲ್ಲರ ಅರಿವಿಗೂ ಬರುತ್ತದೆ. ಕನ್ನಡ ಅಧ್ಯಯನ ಮೂಲಕ ಹಲವಾರು ಸಂಪುಟಗಳನ್ನು ತಂದಿದ್ದರು. ದಲಿತ ಬಂಡಾಯ ಸಾಹಿತ್ಯ ಪ್ರಕಾರಗಳು ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದಾಗ ತಮ್ಮತನ ಉಳಿಸಿಕೊಂಡು ಸಾಹಿತ್ಯ ಕೃಷಿ ಕೈಗೊಂಡರು. ಬೆಂಗಳೂರಿನಲ್ಲಿ ಕನ್ನಡ ಅಧ್ಯಯನ ಕಟ್ಟಿ ಬೆಳೆಸಿದ್ದರು. ಆ ಮೂಲಕ ಸಾಹಿತ್ಯ ಚಟುವಟಿಕೆ ಕೈಗೊಂಡರು. ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು ಎಂದು ವಿವರಿಸಿದರು.
ಕುವೆಂಪು ನಂತರ ಜಿ.ಎಸ್.ಶಿವರುದ್ರಪ್ಪ ಅವರು ಪ್ರಮುಖವಾಗಿ ಕಾಣುತ್ತಾರೆ. ಕನ್ನಡ ಸಾಹಿತ್ಯದ ದಿಗ್ಗಜ ಶಿವರುದ್ರಪ್ಪ ಅವರು ಓದುಗರಿಗೆಂದೇ ಸರಳವಾಗಿ ಬರೆಯುತ್ತಿದ್ದ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಎಂಟು ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿಗಳನ್ನು ಕನ್ನಡದಲ್ಲಿ ಪಡೆದ ನಾವೇ ಧನ್ಯರು ಎಂದು ಸ್ಮರಿಸಿದರು.
ನಿಲಯ ಪಾಲಕಿ ವಸಂತಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಆಯೋಜಕ ಪ್ರತಿಭಾಂಜಲಿ ಡೇವಿಡ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ, ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಧನುಷ್‌ಗೌಡ, ಪ್ರಭು, ಧನಂಜಯ ದರಸಗುಪ್ಪೆ ಇದ್ದರು.
ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ವೈಚಾರಿಕ ನಿಲುವು ಕುರಿತು ಕವಯತ್ರಿ ಆಶಾ ಹನಿಯಂಬಾಡಿ ಉಪನ್ಯಾಸ ನೀಡಿದರು. ಗಾಯಕರಾದ ಶಂಕರ್ ರಾಚಪ್ಪ, ವಂದನಾ, ಹಂಸಾ, ಐಶ್ವರ್ಯಾ, ವಿಶ್ವಾಸ್ ಅವರು ಭಾವಗೀತೆ ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net