ನಿಸ್ವಾರ್ಥ ಕಾಯಕಯೋಗಿ ರೈತ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

ಮಂಡ್ಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು
ಮಂಡ್ಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಿದರು
Published on

ಪ್ರಮುಖ ಮುಖ್ಯಾಂಶಗಳು

  • ರೈತರು ನಿಸ್ವಾರ್ಥ ಕಾಯಕಯೋಗಿಗಳು
  • ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ
  • ರಾಷ್ಟ್ರೀಯ ರೈತ ದಿನಾಚರಣೆ
ಮಂಡ್ಯ: ಸಮಾಜದಲ್ಲಿ ಕಾಯಕಯೋಗಿಯಾಗಿ ರೈತರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೆಲಸದಲ್ಲಿ ನಿಸ್ವಾರ್ಥ ಮನೋಭಾವ ಮತ್ತು ವೃತ್ತಿ ನಿಷ್ಠೆಯನ್ನು ತೋರುತ್ತಾ ಯಾವ ಕೀರ್ತಿಯನ್ನು ಬಯಸದೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು. 
ಪ್ರಸ್ತುತ ದಿನದಲ್ಲಿ ರೈತರನ್ನು ಕುಗ್ಗಿಸುವ ಕೆಲಸವಾಗುತ್ತಿದೆ. ಇದು ದೇಶದ ಹಿತಕ್ಕೆ ಮಾರಕ. ಆದ್ದರಿಂದ ರೈತರನ್ನು ಹಿಗ್ಗಿಸುವ ಕೆಲಸವಾಗಬೇಕಿದೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾದ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ರೈತರಿಲ್ಲದ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲ. ರೈತರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ಅನ್ನದಾತನನ್ನು ಎಲ್ಲರೂ ಸ್ಮರಿಸಿ ಗೌರವಿಸಬೇಕು. 1930ರಲ್ಲೇ  ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕೊಳಲು ಎನ್ನುವ ಕವನ ಸಂಕಲನದಲ್ಲಿ ರೈತ ಗೀತೆಯನ್ನು ಬರೆದಿದ್ದಾರೆ. ಆ ರೈತ ಗೀತೆಯ ಮಹತ್ವವನ್ನು ಕೇಳುವುದರ ಜತೆಗೆ ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ರೈತರಿಗೆ ದೊರೆಯಬೇಕಾದ ಮನ್ನಣೆ ದೊರೆಯುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಆಧುನಿಕತೆಗೆ ರೈತರು ಹೊಂದಿಕೊಳ್ಳಲು ತಾಂತ್ರಿಕ ಮತ್ತು ವೈಜ್ಞಾನಿಕ ಉಪಕ್ರಮಗಳನ್ನು ತಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ರೈತರು ದೇಶ ಆರ್ಥಿಕತೆಗೆ ರೈತರ ಕೊಡುಗೆ ಅಪಾರ. ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಇಲ್ಲಿನ ರೈತರು ಸಹ ನಮ್ಮ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ರೈತರು ವೈಜ್ಞಾನಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು. ಮಣ್ಣಿನ ಗುಣಮಟ್ಟವನ್ನು ಯಾವ ರೀತಿಯಲ್ಲಿ ಹೆಚ್ಚಿಸಿಕೊಳ್ಳಬೇಕು. ಕಬ್ಬು, ಭತ್ತ ಬಿಟ್ಟು ವಿವಿಧ ವೈಜ್ಞಾನಿಕ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು. ರೈತರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಎಲ್ಲ ಕಾರ್ಯಕ್ರಮಗಳನ್ನು ರೈತರು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ಪ್ರಗತಿ ಕಾಣಬೇಕು ಎಂದು ತಿಳಿಸಿದರು. 
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಜಿಲ್ಲಾ ಕೃಷಿಕರ ಸಮಾಜದ ಅಧ್ಯಕ್ಷ ಸಿ.ಎಂ.ನಾಗರಾಜು, ಕಬ್ಬಿನ ಗಾಣದ ಮಾಲೀಕರ ಸಂಘ ಅಧ್ಯಕ್ಷ ಸೋಮಶೇಖರ್‌ಗೌಡ, ರೈತರ ಪಾಠಶಾಲೆ ಮುಖ್ಯಸ್ಥ ಸತ್ಯಮೂರ್ತಿ ಇತರರಿದ್ದರು. ಇದೇ ವೇಳೆ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net