ವೈದ್ಯರ ಆತ್ಮಹತ್ಯೆ ಪ್ರಕರಣ ಹೆಚ್ಚಳ: ಖ್ಯಾತ ಹೃದ್ರೋಗ ತಜ್ಞೆ ಡಾ.ಎಸ್.ಹೇಮಾ ಕಳವಳ

ಮಂಡ್ಯದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್  ಸಂಸ್ಥೆ ಇಂಟರ್‌ನ್ಯಾಷನಲ್ ವತಿಯಿಂದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ವತಿಯಿಂದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಡಾ.ಬಿ.ಸಿ.ರಾಯ್ ಪ್ರಶಸ್ತಿ ಪ್ರದಾನ ಸಮಾರಂಭ
  • ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜನೆ
ಮಂಡ್ಯ: ಇತ್ತೀಚಿನ ದಿನಗಳಲ್ಲಿ ವೈದ್ಯರಲ್ಲೂ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ಇದು ಏಕೆ ಸಂಭವಿಸುತ್ತಿದೆ ಎಂದು ಚಿಂತನೆ ಮಾಡಬೇಕಿದೆ ಎಂದು ಖ್ಯಾತ ಹೃದ್ರೋಗ ತಜ್ಞೆ ಡಾ.ಎಸ್.ಹೇಮಾ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಮತ್ತು ಡಾ.ಬಿ.ಸಿ.ರಾಯ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನೇಕ ವೈದ್ಯರು ವೃತ್ತಿ ಬಿಟ್ಟು ಬೇರೆ ವೃತ್ತಿಯತ್ತ ಗಮನ ಹರಿಸುತ್ತಿದ್ದಾರೆ ಎಂದ ಅವರು, ನೋವು ನಲಿವಿನಲ್ಲಿಯೂ ಜೀವ ಉಳಿಸುವ ಕೆಲಸವನ್ನು ವೈದ್ಯರು ಮಾಡುತ್ತಿದ್ದಾರೆ. ರೋಗಿಗೆ ಉತ್ತಮ ಚಿಕಿತ್ಸೆ ಸಿಗಲಿ ಎಂಬುದಷ್ಟೇ ಆಶಯವಾಗಿರುತ್ತದೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ವೈದ್ಯರನ್ನು ಕಣ್ಣಿಗೆ ಕಾಣುವ ದೇವರು ಎಂದೇ ಭಾವಿಸಲಾಗಿದೆ. ಕರೊನಾ ಸಂಕಷ್ಟದ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿದ್ದವು. ಆದರೆ, ಆಸ್ಪತ್ರೆಗಳು ಮುಚ್ಚಿರಲಿಲ್ಲ, ವೈದರು ಆಸ್ಪತ್ರೆಯಲ್ಲಿದ್ದರು. ಇತ್ತೀಚಿನ ವೈದ್ಯರು ಡಾ.ಬಿ.ಸಿ.ರಾಯ್ ಅವರ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಉತ್ತಮ ವೈದ್ಯರನ್ನು ಗುರುತಿಸಿ ಗೌರವಿಸುವುದು ಪ್ರತಿ ನಾಗರಿಕನ ಕರ್ತವ್ಯ, ರೋಗ ಬಂದಾಗ ವೈದ್ಯರು ಸೇವೆ ಅನನ್ಯ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ನಾಗರಾಜು ವಿ.ಭೈರಿ ಮಾತನಾಡಿ, ಭಾರತ ಕಂಡಂತಹ ಅಪರೂಪದ ವೈದ್ಯರು ಮತ್ತು ಮಾಜಿ ಮುಖ್ಯಮಂತ್ರಿ ಡಾ.ಬಿ.ಸಿ.ರಾಯ್ ಅವರ ಜೀವನ ದಂತಕತೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರವು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಾಮಾಣಿಕ ವೈದ್ಯರ ಸೇವೆಯನ್ನು ಪ್ರಶ್ನೆ ಮಾಡುವ ಕಾಲಘಟ್ಟದಲ್ಲಿ ನಿಂತಿದ್ದೇವೆ. ದೊಡ್ಡದೊಡ್ಡ ಆಸ್ಪತ್ರೆಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.
ಅಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಕೆ.ಆರ್.ಶಶಿಧರ ಈಚಗೆರೆ, ಮಾಜಿ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ, ಒಂದನೇ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಎರಡನೇ ಉಪ ಪ್ರಾಂತಪಾಲ ಎಂ.ಎನ್.ಶಿವಣ್ಣ, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ನೀನಾ ಪಟೇಲ್ ಇತರರಿದ್ದರು. ಇದೇ ಸಂದರ್ಭದಲ್ಲಿ 20 ಜನ ವೈದ್ಯರಿಗೆ ಡಾ.ಬಿ.ಸಿ. ರಾಯ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net