ನಾಗಮಂಗಲ ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ಎನ್.ಜೆ.ರಾಜೇಶ್, ಡಾ.ಅಶೋಕ್, ಬಿ.ಎಸ್.ಸತೀಶ್ ಇತರರು ಇದ್ದರು.
ತಾಲೂಕಿನಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕೆಲಸ ಕಾರ್ಯಗಳು ನನ್ನ ಅವಧಿಯಲ್ಲೇ ಆಗಿದ್ದು, ಜನರು ಇದನ್ನು ಅರ್ಥೈಸಿಕೊಂಡು ಮುಂದಿನ ದಿನಗಳಲ್ಲಿಯೂ ಕಾಂಗ್ರೆಸ್ ಪರ ನಿಲ್ಲಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿ ಜನ ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಆದರೆ ಎಲ್ಲ ಹಳ್ಳಿಗಳ ರಸ್ತೆಗಳನ್ನು ಒಂದೇ ಬಾರಿಗೆ ಅಭಿವೃದ್ಧಿಪಡಿಸಬೇಕೆಂದರೆ ನನ್ನಿಂದ ಪವಾಡ ಮಾಡಲು ಸಾಧ್ಯವಿಲ್ಲ. ಕಸುವಿನಹಳ್ಳಿ ಗ್ರಾಮದಿಂದ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸ ಲಾಗುವುದು. ಆದರೆ ಬಹುಮುಖ್ಯವಾಗಿ ಆಗಬೇಕಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೊದಲ ಆದ್ಯತೆ ಕೊಟ್ಟು ಶೀಘ್ರದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು. ಗ್ರಾಮಸ್ಥರು ಇದೇ ಪ್ರೀತಿ ವಿಶ್ವಾಸವನ್ನು ಮುಂದಿನ ದಿನಗಳಲ್ಲಿಯೂ ತೋರಿಸಬೇಕು ಎಂದು ತಿಳಿಸಿದರು.
ಚಿಕ್ಕ ಮಕ್ಕಳಿಗೆ ಅಕ್ಷರ ಕಲಿಕೆ, ಶಿಸ್ತು, ಸ್ವಚ್ಛತೆಯ ಅಭ್ಯಾಸ ಮಾಡಿಸಲು ಮತ್ತು ಮಹಿಳೆಯರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಲು ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮಾತೃಸ್ವರೂಪಿಗಳಾಗಿ ಕೇಂದ್ರಕ್ಕೆ ಬರುವ ಚಿಕ್ಕ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಜತೆಗೆ ಶಿಸ್ತು, ಸಂಸ್ಕಾರ ಕಲಿಸಬೇಕು. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರದ ಮೂಲಕ ಸಿಗುವ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಬೆಲ್ಲದ ಆರತಿಯ ಸ್ವಾಗತ ಕೋರಿದರೆ, ಚಿಕ್ಕಮಕ್ಕಳು ಗುಲಾಬಿ ಹೂವು ಕೊಟ್ಟು ಸಚಿವರನ್ನು ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಹಸೀಲ್ದಾರ್ ಡಾ.ಅಶೋಕ್, ತಾಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಡಿವೈಎಸ್‌ಪಿ ಬಿ.ಚಲುವರಾಜು, ಸಿಡಿಪಿಒ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.