ಭೂಮಾಫಿಯಾ ಕೈವಾಡದಿಂದ ದಾಖಲೆ ನಾಶ

ನಾಗಮಂಗಲ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ಹಡೇನಹಳ್ಳಿ ಉಮೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಚನ್ನಪ್ಪ, ಮೈತ್ರಿಕೃಷ್ಣೇಗೌಡ ಇದ್ದರು.
ನಾಗಮಂಗಲ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ಹಡೇನಹಳ್ಳಿ ಉಮೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಚನ್ನಪ್ಪ, ಮೈತ್ರಿಕೃಷ್ಣೇಗೌಡ ಇದ್ದರು.
Published on
ನಾಗಮಂಗಲ: ಕಂದಾಯ ಇಲಾಖೆಯ ಮೂಲ ಕಡತಗಳನ್ನು ತಾಲೂಕು ಆಡಳಿತಸೌಧ ಸಮೀಪದ ಕಸದ ತೊಟ್ಟಿಯಲ್ಲಿ ಬಿಸಾಡಿರುವುದರ ಹಿಂದೆ ತಾಲೂಕಿನಲ್ಲಿ ನಡೆಯುತ್ತಿರುವ ಭೂಮಾಫಿ ಕೈವಾಡವಿದ್ದು, ಮೂಲ ದಾಖಲೆ ನಾಶಪಡಿಸುವ ಹುನ್ನಾರವಾಗಿದೆ ಎಂದು ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ಹಡೇನಹಳ್ಳಿ ಉಮೇಶ್ ಆರೋಪಿಸಿದರು.
ತಾಲೂಕಿನ ಕಂದಾಯ ಇಲಾಖೆಯಲ್ಲಿ ಭೂಮಾಫಿಯಾದವರು ಅಕ್ರಮ ನಡೆಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪಡೆದಿರುವ ಕುರಿತಾಗಿ ಈ ಹಿಂದೆ ಲೋಕಾಯುಕ್ತರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಹಲವರನ್ನು ಬಂಧಿಸಿದ್ದರು. ಆದಾಗ್ಯೂ ಕಂದಾಯ ಇಲಾಖೆಯಲ್ಲಿ ಅಕ್ರಮಗಳಿಗೆ ಕಡಿವಾಣ ಬೀಳುತ್ತಿಲ್ಲವೆಂದರೆ ಇದರ ಹಿಂದೆ ಇರುವಂತಹ ಪ್ರಭಾವಿ ಯಾರೆಂಬುದನ್ನು ಸೂಕ್ತ ತನಿಖೆ ನಡೆಸಿ ಪತ್ತೆಹಚ್ಚಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.10ರಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಾಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಕಚೇರಿಯಲ್ಲಿಯೇ ಮೂಲ ಕಡತಗಳು ಲಭ್ಯವಿದ್ದರೆ ನಕಲಿ ಕಡತಗಳು ಸಿಕ್ಕಿಹಾಕಿಕೊಳ್ಳಬಹುದು ಎಂದು ಸಾಕ್ಷೃ ನಾಶಕ್ಕಾಗಿ ಮೂಲ ದಾಖಲೆಗಳನ್ನು ಕಸದ ತೊಟ್ಟಿಗೆ ಹಾಕಿದ್ದು, ಇದರ ಹಿಂದೆ ಭೂಮಾಫಿಯಾದವರ ಕೈವಾಡವಿರುವುದರಲ್ಲಿ ಸಂಶಯವಿಲ್ಲ. ರೆಕಾರ್ಡ್ಸ್ ರೂಂನಲ್ಲಿನ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಯನ್ನು ಅಮಾನತುಗೊಳಿಸಿ ಅವರ ವಿರುದ್ಧ ದೂರು ದಾಖಲಿಸಿ ವಿಚಾರಣೆ ನಡೆಸಿದರೆ ಸತ್ಯಾಂಶ ಹೊರಬರಲಿದೆ ಎಂದರು.
ಜೆಡಿಎಸ್ ಮುಖಂಡ ಚುಂಚನಹಳ್ಳಿ ಪುಟ್ಟರಾಜು ಮಾತನಾಡಿ, ಸಚಿವರು ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ಭೂಮಾಫಿಯದವರ ಕೈವಾಡದಿಂದ ಅರ್ಹ ರೈತರು ಸಾಗುವಳಿ ಪತ್ರ ಪಡೆದಿದ್ದರೂ ಬಕಪಕ್ಷಿಯಂತೆ ಕಾಯುವಂತಾಗಿದೆ. ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಪಡೆದವರಿಗೆ ಶಿಕ್ಷೆ ಕೊಟ್ಟು ಅರ್ಹ ರೈತರಿಗೆ ಜಮೀನಿನ ದಾಖಲೆ ಕೊಡಸಬೇಕು.3 ವರ್ಷಗಳಿಂದಲೂ ವಿಚಾರಣೆ ನೆಪ ಹೇಳಿ ಬಲಾಢ್ಯರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚನ್ನಪ್ಪ, ಮುಖಂಡರಾದ ಡಿ.ಟಿ.ಶ್ರೀನಿವಾಸ್, ಮುಳುಕಟ್ಟೆ ಸಂತೋಷ್, ಕಂಚಿನಕೋಟೆ ಮೂರ್ತಿ, ನಾಗೇಶ್, ಪುಟ್ಟಸ್ವಾಮಿ, ಮೇನಕಾ, ಮೈತ್ರಿ ಕೃಷ್ಣೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net