ಸಂಸ್ಕಾರವಿರುವ ಮನುಷ್ಯ ಜನ್ಮ ಶ್ರೇಷ್ಠ

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಸರ್ಕಲ್‌ನಲ್ಲಿ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಸರ್ಕಲ್‌ನಲ್ಲಿ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು.
Published on
ನಾಗಮಂಗಲ: ಕೆಟ್ಟ ಕೆಲಸ ಮಾಡದಂತೆ ಮನಸ್ಸಿಗೆ ಸಂಸ್ಕಾರ ಕೊಡಬೇಕಿದೆ. ಮನುಷ್ಯ ಹೊರ ಜಗತ್ತಿಗೆ ಸೌಂದರ್ಯವಾಗಿಲ್ಲದಿದ್ದರೂ ಅವನ ಮನಸ್ಸು ಉತ್ತಮವಾಗಿರಬೇಕು. ಅಂತೆಯೇ ಮನುಷ್ಯ ಜನ್ಮ ಶ್ರೇಷ್ಠವೆನಿಸಲು ಸಂಸ್ಕಾರವಂತನಾಗಿರಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಸರ್ಕಲ್‌ನಲ್ಲಿ ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ದೇಹ ಚೆನ್ನಾಗಿರಲು ಒಳ್ಳೆಯ ಆಹಾರ ಸೇವಿಸುತ್ತೇವೆ. ಅದರಂತೆ ಮನಸ್ಸು ಚೆನ್ನಾಗಿರಲು ಒಳ್ಳೆಯ ವಿಚಾರಗಳನ್ನು ಕೊಡಬೇಕಿದೆ. ಆದ್ದರಿಂದ ಇಂತಹ ಸತ್ಸಂಗ, ಭಜನೆಯಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು. ಬದುಕನ್ನು ಕಟ್ಟಿಕೊಡುವುದು ಮನಸ್ಸೇ ಹೊರತು ಅನ್ನ ತಿಂದ ದೇಹವಲ್ಲ. ಮನುಷ್ಯ ನೋಡಲು ಎಷ್ಟೇ ಸುಂದರವಾಗಿದ್ದರೂ ಅವನ ಒಳಮಾತು ಸರಿಯಿಲ್ಲದಿದ್ದರೆ ಆ ಸೌಂದರ್ಯ ವ್ಯರ್ಥವಾಗುತ್ತದೆ. ಸುಂದರ ಮನಸ್ಸು ಇಲ್ಲದಿದ್ದರೆ ಹೊರಗಿನ ಸೌಂದರ್ಯ ನೋಡಲು ಯಾರೂ ಮುಂದಾಗುವುದಿಲ್ಲ. ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಮನಸ್ಸಿನ ಸೌಂದರ್ಯ ಮುಖ್ಯ ಎಂದರು.
ಯಾರೇ ಆಗಿರಲಿ ತಾಯಿ ಸ್ವರೂಪದಲಿ ತಿಳಿಹೇಳಿದರೆ ಸರಿಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಯಾರನ್ನೂ ದ್ವೇಷ ಮಾಡಬೇಡಿ, ಎಲ್ಲರಲ್ಲಿಯೂ ಸ್ನೇಹ ಭಾವನೆಯನ್ನಿಟ್ಟುಕೊಂಡು ಜೀವಿಸಿ. ಕರುಣೆ ಇರುವನು, ಅಹಂಕಾರ ಪಡದವನು ಹಾಗೂ ಸುಖ- ದುಃಖಗಳಲ್ಲಿ ಪಾಲ್ಗೊಳ್ಳುವವನು ದೇವರಿಗೆ ಬಹುಬೇಗ ಇಷ್ಟವಾಗುತ್ತಾನೆ. ಅವಮಾನ ಮಾಡುವವರು, ಟೀಕಿಸುವವರಿಗೆ ಮರು ಉತ್ತರ ನೀಡದೆ ಮೌನವಹಿಸಿ ನಿರ್ಲಕ್ಷೃ ಮಾಡಿದರೆ ನಮ್ಮ ಜ್ಞಾನವೇ ಉತ್ತುಂಗಕ್ಕೇರಲಿದೆ ಎಂದರು.
ಧೂಮಪಾನ, ಮದ್ಯಪಾನ ತ್ಯಜಿಸಿ: ಆದಿಚುಂಚನಗಿರಿ ಮಠದ ಭಕ್ತರು ಸಂಸ್ಕಾರವಂತರು ಎಂದರೆ ಮಠದ ಗೌರವ ಹೆಚ್ಚಲಿದೆ. ಆದ್ದರಿಂದ ಯಾರೂ ಕುಡಿದು ತೂರಾಡಬೇಡಿ. ಹೆಂಡ ಕುಡಿದರೆ ಲಿವರ್ ಹಾಳಾಗಲಿದೆ. ಲಕ್ಷಾಂತರ ರೂ. ಖರ್ಚು ಮಾಡುವಷ್ಟು ಶಕ್ತಿ ಇಲ್ಲವೆಂಬುದು ನಿಮಗೆ ತಿಳಿದಿದ್ದರೂ ಕೆಟ್ಟ ಚಟಕ್ಕೆ ದಾಸರಾಗುವುದು ಏಕೆ?. ಮಠದಲ್ಲಿನ ವಿದ್ಯಾರ್ಥಿಗಳಿಗೆ ಹೇಗೆ ಸಂಸ್ಕಾರದ ಜತೆಗೆ ವಿದ್ಯೆ ಕೊಡುವ ಮೂಲಕ ಸತ್ಪ್ರಜೆಗಳನ್ನಾಗಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆಯೋ ಅದರಂತೆ ಮಕ್ಕಳ ಪಾಲಕರಿಗೂ ಸಂಸ್ಕಾರ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಸತ್ಸಂಗ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಡಿಮೆ ಕೊಳೆಯಾಗಿರುವ ಬಟ್ಟೆಯನ್ನು ಒಂದು ಬಾರಿ ತೊಳೆದರೆ ಸ್ವಚ್ಛವಾಗಲಿವೆ, ಆದರೆ ಹೆಚ್ಚು ಕೊಳೆಯಾದ ಬಟ್ಟೆಗಳನ್ನು ಒಂದು ಬಾರಿ ತೊಳೆದರೆ ಸಾಕಾಗುವುದಿಲ್ಲ. ಅದೇ ರೀತಿ ಕೆಲವರಿಗೆ ಒಂದು ಬಾರಿಯ ಸತ್ಸಂಗದಿಂದ ಮನಸ್ಸು ಶುದ್ಧವಾಗಲಿದೆ, ಆದರೆ ಮನಸ್ಸು ಹೆಚ್ಚು ಮಲೀನವಾಗಿರುವವರಿಗೆ, ದುಶ್ಚಟಗಳಿಗೆ ದಾಸರಾಗಿರುವವರಿಗೆ ಒಂದು ಬಾರಿಯ ಸತ್ಸಂಗದಿಂದ ಬದಲಾಯಿಸಲು ಸಾಧ್ಯವಿಲ್ಲ, ಆದ್ದರಿಂದ ಮತ್ತೊಮ್ಮೆ ಸತ್ಸಂಗವನ್ನು ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದರು.
ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಶ್ರೀಸತ್ಕೀರ್ತಿನಾಥ ಸ್ವಾಮೀಜಿ, ಶ್ರೀಶೈಲೇಂದ್ರನಾಥ ಸ್ವಾಮೀಜಿ, ಶ್ರೀಸಾಯಿಕೀರ್ತಿನಾಥ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ತಹಸೀಲ್ದಾರ್ ಆದರ್ಶ್, ಡಿವೈಎಸ್ಪಿ ಚಲುವರಾಜು, ಮುಖಂಡರಾದ ಸುನೀಲ್‌ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ವೆಂಕಟೇಶ್, ಕೊಣನೂರು ಹನುಮಂತು, ಆರ್.ಕೃಷ್ಣೇಗೌಡ, ಎನ್.ಜೆ.ರಾಜೇಶ್ ಮತ್ತಿತರರಿದ್ದರು.
ಜಿಲ್ಲೆಯಲ್ಲೆಡೆ ಸತ್ಸಂಗ ನಡೆಯಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಕ್ಷೇತ್ರದ ಬೆಳವಣಿಗೆಗೆ ಶ್ರೀಗಳು ಹಗಲಿರುಳು ಶ್ರಮಿಸುತ್ತಿದ್ದು, ಕ್ಷೇತ್ರ ಹಾಗೂ ಭಕ್ತರ ನಡುವೆ ಸಂಬಂಧಕ್ಕಾಗಿ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದ್ದಾರೆ. ರಾಷ್ಟ್ರದ ವಿವಿಧೆಡೆ ಸತ್ಸಂಗ ನಡೆಯುತ್ತಿದೆ. ಹಲವು ಕಡೆಗಳಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗಿಯಾಗಿ ಯಶಸ್ವಿಗೊಂಡಿವೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಠದ ಸತ್ಸಂಗ ಕಾರ್ಯಕ್ರಮ ನಡೆಸುವ ಕಾರ್ಯ ಶ್ಲಾಘನೀಯ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಒಳಿತಾಗಲಿದೆ. ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು ಅನ್ನದಾನ ಮಾಡಿಕೊಂಡು ಮಠ ನಡೆಸಿಕೊಂಡು ಹೋಗಬಹುದಿತ್ತು. ಆದರೆ ಅವರು ಜನರ ನೆಮ್ಮದಿ, ಆರೋಗ್ಯವಂತರನ್ನಾಗಿ ನೋಡಬೇಕೆಂದು ಕನಸು ಕಂಡು ಶ್ರಮಿಸಿದರು. ಭಕ್ತರಲ್ಲಿ ನೆಮ್ಮದಿ, ಆಧ್ಯಾತ್ಮಿಕ ಭಾವನೆ ಮೂಡಿಸಲು ಸತ್ಸಂಗ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಅದ್ದೂರಿ ಮೆರವಣಿಗೆಯೊಂದಿಗೆ ಸ್ವಾಗತ: ಚಿಣ್ಯ ಗ್ರಾಮಕ್ಕೆ ಸತ್ಸಂಗ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳನ್ನು ಬೆಳ್ಳಿರಥದಲ್ಲಿ ಕೂರಿಸಿ, ಹಳ್ಳಿಕಾರ್ ಎತ್ತುಗಳ ಮೆರವಣಿಗೆ, ಪೂಜಾ ಕುಣಿತ, ವಾದ್ಯಗೋಷ್ಠಿ, ಸೇರಿದಂತೆ ವಿವಿಧ ಕಲಾತಂಡಗಳ ಕಲಾಪ್ರದರ್ಶನ ಹಾಗೂ ಪೂರ್ಣಕುಂಭದೊಂದಿಗೆ ಶ್ರೀಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತಂದರು. ವೇದಿಕೆಯಲ್ಲಿ ಚಿಣ್ಯದ ವೆಂಕಟೇಶ್ ಕುಟುಂಬದಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು.
ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ವೇದಿಕೆಯಲ್ಲಿ ವಿವಿಧ ಶಾಲಾ, ಕಾಲೇಜುಗಳ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಶ್ರೀಸಾಯಿಕೀರ್ತಿನಾಥ ಸ್ವಾಮೀಜಿ ಅವರಿಂದ ಸಂಗೀತ ಗಾಯನ ಹಾಗೂ ಭಜನೆ ನಡೆಯಿತು. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಭಜನೆಯಲ್ಲಿ ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net