ಸಾಂಸ್ಕೃತಿಕ ಚಟುವಟಿಕೆಯಿಂದ ಸಂಸ್ಕೃತಿ ಪ್ರಜ್ಞೆ ಜಾಗೃತ

ನಾಗಮಂಗಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಅವರಿಗೆ ನುಡಿಗೌರವ ಸಲ್ಲಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ಇದ್ದರು.
ನಾಗಮಂಗಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಅವರಿಗೆ ನುಡಿಗೌರವ ಸಲ್ಲಿಸಲಾಯಿತು. ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ಇದ್ದರು.
Published on
ನಾಗಮಂಗಲ: ಊರಿಗೆ ಅಲಂಕಾರ ಮಾಡುವುದರಿಂದ ಸಂಸ್ಕೃತಿ ಬೆಳೆಯುವುದಿಲ್ಲ ಬದಲಾಗಿ ಸಾಂಸ್ಕೃತಿಕ ಚಟುವಟಿಕೆ ಹೆಚ್ಚೆಚ್ಚು ಮೇಳೈಸಿದಾಗ ಊರಿನಲ್ಲಿ ಸಂಸ್ಕೃತಿ ಪ್ರಜ್ಞೆ ಜಾಗೃತವಾಗುತ್ತದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಕನ್ನಡ ಸಂಘ ವಿಶ್ವಸ್ಥ ಸಮಿತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ನುಡಿಗೌರವ ಸ್ವೀಕರಿಸಿ ಮಾತನಾಡಿದರು.
ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರವಹಿಸುತ್ತಿರುವ ರಂಗಕಲೆ ಸಂಸ್ಕೃತಿ ಅತಿ ಮುಖ್ಯ, ಇದರೊಂದಿಗೆ ಮಕ್ಕಳ ಚಟುವಟಿಕೆ ಹೆಚ್ಚು ಜರುಗಿದಾಗ ಸ್ವಸ್ಥ ಸಮಾಜ ಕಟ್ಟುವ ಕಾಯಕಕ್ಕೆ ವೇಗ ದೊರಕಿದಂತಾಗುತ್ತದೆ. ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿ ನಲುಗುತ್ತಿರುವ ಮಕ್ಕಳಿಗೆ ಬಂಧುತ್ವದ ಸೆಳೆತ ಮೂಡಿಸುವಲ್ಲಿ ತಾಂತ್ರಿಕ ಗೋಡೆ ಭೇದಿಸುವಲ್ಲಿ ರಂಗಭೂಮಿ ಜೀವಂತವಾಗಿರುವ ಅತ್ಯವಶ್ಯಕ ಸನ್ನಿವೇಶ ಇದೆ. ನಾಗಮಂಗಲ ಸಾಂಸ್ಕೃತಿಕ ಹೆಗ್ಗುರುತಿಗೆ ಸಾಕ್ಷಿ. ಈ ಊರಿನ ನಾಗರಿಕ ಪ್ರಜ್ಞೆ ಮೆಚ್ಚುಗೆಗೆ ಅರ್ಹ. ಸಾರ್ವಜನಿಕರು, ಉದ್ಯಮಿಗಳು ಎಲ್ಲರ ಸಹಕಾರದಿಂದ ಕಳೆದ 53 ವರ್ಷಗಳಿಂದ ಕನ್ನಡ ಸಂಘ ನಿರಂತರ ರಂಗ ಸೇವೆ ಮಾಡುತ್ತಿದೆ. ಇದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
53 ವರ್ಷಗಳ ಇತಿಹಾಸ ಇರುವ ಕನ್ನಡ ಸಂಘಕ್ಕೆ ರಂಗ ಚಟುವಟಿಕೆಗೆ ಸುಸಜ್ಜಿತ ರಂಗಮಂದಿರ ಕಲ್ಪಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಬೇಸರದ ಸಂಗತಿ. ನಾಗಮಂಗಲದಲ್ಲಿ ರಂಗಕಾಯಕ ಮಾಡುವ ಜನರಿದ್ದಾರೆ. ರಂಗಚಟುವಟಿಕೆ ಪ್ರೋತ್ಸಾಹಿಸುವ ಜನರು ಇದ್ದಾರೆ. ಮುಂದಿನ ದಿನಗಳಲ್ಲಿ ರಂಗಮಂದಿರದ ಕೊರತೆ ಕೂಡ ನೀಗುವಂತಾಗಲಿ. ಯಾವ ಊರಿನಲ್ಲಿ ರಂಗ ಚಟುವಟಿಕೆ ಜೀವಂತವಾಗಿರುತ್ತದೆಯೋ ಆ ಊರಿನಲ್ಲಿ ಸಾಂಸ್ಕೃತಿಕತೆ, ಜನರ ಆತ್ಮಸಾಕ್ಷಿ ಎಚ್ಚರವಾಗಿರುತ್ತದೆ ಎಂದರು.
ಊರು ಬೆಳೆದಂತೆ ರಂಗ ಚಟುವಟಿಕೆಗೆ ಆರ್ಥಿಕ ಬಲ ಬೇಕು, ಇಲ್ಲವಾದರೆ ರಂಗಚಟುವಟಿಕೆ ಆವಿಯಾಗುತ್ತದೆ. ಆದರೆ ಕನ್ನಡ ಸಂಘ ಇನ್ನೂ ಹಸಿರಾಗಿದೆ, ರಂಗಚಟುವಟಿಕೆಗೆ ಬೀಜ ಬಿತ್ತುತ್ತಿದೆ. ರಂಗಕಲೆ ಜಾತ್ಯಾತೀತ ಧರ್ಮಾತೀತ ಆಗಿರಲಿ. ಸಮಾಜಕ್ಕೆ ಚೈತನ್ಯ ನೀಡುವ ಕಾಯಕ ನಿರಂತರವಾಗಿರಲಿ. ಸ್ಥಳೀಯ ಮಕ್ಕಳು ಇಂತಹ ಚಟುವಟಿಕೆಯನ್ನು ಆಸ್ವಾದಿಸಲು ಪ್ರಚೋದಿಸಿ ಎಂದು ಸಲಹೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನೀಲಮ್ಮ ಮಾತನಾಡಿ, ಈ ನಾಟಕೋತ್ಸವ ಮನರಂಜನೆ ಜತೆಗೆ ಸಂದೇಶ ಕೊಡುತ್ತಿದೆ. 53 ವರ್ಷಗಳಿಂದ ಸದಭಿರುಚಿಯ ಕಾರ್ಯ ಹೆಮ್ಮೆಯ ವಿಷಯ. ರಾಜ್ಯೋತ್ಸವದ ಅಂಗವಾಗಿ ನಾಟಕೋತ್ಸವದ ಆಯೋಜನೆ ತುಂಬಾ ವಿಶೇಷ. ಪ್ರೇಕ್ಷಕರಲ್ಲಿ ನಾಟಕದ ಅಭಿರುಚಿ ಬೆಳೆಸುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಮಾತನಾಡಿ, ನಾಗಮಂಗಲದಲ್ಲಿ ಕಲಾವಿದರಿಗೆ ಬರವಿಲ್ಲ. ರಂಗಮಂದಿರ ನಿರ್ಮಾಣ ಶೀಘ್ರವೇ ಆಗಲಿದೆ, ಸ್ಥಳದ ಕೊರತೆ ಇದೆ. ಸೂಕ್ತ ಸ್ಥಳ ನಿಗದಿಪಡಿಸಿ ಕಲಾವಿದನಾಗಿ ಮುಂಚೂಣಿಯಲ್ಲಿ ನಿಂತು ನಾನೇ ನನ್ನ ತಂದೆ ಚಲುವರಾಯಸ್ವಾಮಿ ಅವರ ಮುಂದೆ ಬೇಡಿಕೆ ಇಡುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣ ಗೌಡ ಮಾತನಾಡಿದರು. ಆಳ್ವಾಸ್ ರಂಗ ಅಧ್ಯಯನ ತಂಡ ಡಾ.ಜೀವನ್ ರಾಂ ಸುಳ್ಯ ನಾಯಿಮರಿ ನಾಟಕ ಪ್ರಸ್ತುತ ಪಡಿಸಿದರು.
ಕರ್ನಾಟಕ ನಾಟಕ ಅಕಡೆಮಿ ಸದಸ್ಯ ಚಂದ್ರು, ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ್, ಕನ್ನಡ ಸಂಘದ ಕಾರ್ಯದರ್ಶಿ ಎನ್.ಸಿ.ಶಿವಕುಮಾರ್, ಸಂಘದ ಸದಸ್ಯರಾದ ಪ್ರಶಾಂತ್, ಮಂಜುನಾಥ್, ನಟರಾಜು, ಮುರಳಿ, ನಾ.ಸು.ನಾಗೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಕೊಣನೂರು ಹನುಮಂತು ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net