

ಮಂಡ್ಯ: ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ಟೀಕಿಸಿದ ಮಾತ್ರಕ್ಕೆ ದೊಡ್ಡವರಾಗುತ್ತೇನೆಂಬ ಭ್ರಮೆ ಬೇಡ ಎಂದು ಮಾಜಿ ಶಾಸಕರಾದ ಸುರೇಶ್‌ಗೌಡ ಮತ್ತು ಡಾ.ಕೆ.ಅನ್ನದಾನಿ ವಿರುದ್ಧ ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ ವಾಗ್ದಾಳಿ ನಡೆಸಿದರು.
ಎನ್.ಚಲುವರಾಯಸ್ವಾಮಿ ಅವರು ಇಡೀ ಜಿಲ್ಲೆಯ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ 4ನೇ ಬಾರಿಗೆ ಸಚಿವರಾಗಿ ಜನಮನ್ನಣೆಯನ್ನು ಸಾಬೀತುಪಡಿಸಿರುತ್ತಾರೆ. ಆಕಸ್ಮಿಕವಾಗಿ 2 ಬಾರಿ ಶಾಸಕರಾದ ಸುರೇಶ್‌ಗೌಡ ಅವರು ಸಚಿವರನ್ನು ಟೀಕಿಸಿದರೆ ದೊಡ್ಡವರಾಗುತ್ತೀರೆಂದು ಅಂದುಕೊಂಡಿದ್ದರೆ ಅದು ಭ್ರಮೆ. ಜಿಲ್ಲೆಯಲ್ಲಿ ನೀರಾವರಿ ಭವನ, ಲೋಕೋಪಯೋಗಿ ಭವನ, ಮೆಡಿಕಲ್ ಕಾಲೇಜು, ಮೈಶುಗರ್ ಪುನ್ನಶ್ವೇತನ ಹಾಗೂ ಕೃಷಿ ವಿಶ್ವ ವಿದ್ಯಾಲಯ ಇನ್ನೂ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇಕೆದಾಟು ಯೋಜನೆಗೆ ಪರ್ಯಾಯ ಭೂಮಿಯನ್ನು ನೀಡುವ ನಿಟ್ಟಿನಲ್ಲಿ ಜನತೆಯ ಅಭಿವೃದ್ಧಿಯನ್ನು ಮರೆಯುವುದಿಲ್ಲ. ಮೇಕೆದಾಟಿನ ವಿಚಾರವಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಂದ ಸ್ಪಷ್ಟನೆ ಕೊಡಿಸಿದರೆ ಒಳ್ಳೆಯದು. ನಾಗಮಂಗಲಕ್ಕೆ ಭೇಟಿ ನೀಡಲು ಬರುವುದನ್ನು ‘ನಾನು ಕಳ್ಳ ಪರರನ್ನು ನಂಬ’ ಎಂಬಂತೆ ನಮ್ಮ ನಾಯಕರನ್ನು ಟೀಕಿಸುವುದನ್ನು ಖಂಡಿಸುತ್ತೇವೆ. ಎಚ್‌ಎಎಲ್‌ನಲ್ಲಿ ಅವ್ಯವಹಾರ ಎಸಗಿರುವ ನೀವು ನಮ್ಮ ನಾಯಕರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಬೇಕು. ಜನತಾದಳದ ಕಾರ್ಯಕರ್ತರ ಯಾವುದೇ ಚುನಾವಣೆಗೆ ಸ್ಪಂದಿಸಿದೇ ನಿಮ್ಮ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿಢೀರನೆ ಪ್ರತ್ಯಕ್ಷರಾಗಿ ಕಾಂಗ್ರೆಸ್ ನಾಯಕರನ್ನು ಟೀಕಿಸುವುದನ್ನು ಬಿಟ್ಟು ಸೈದ್ಧಾಂತಿಕವಾಗಿ ರಾಜಕೀಯ ಮಾಡಬೇಕೆಂದು ಆಗ್ರಹಿಸಿದರು.
ಮಳವಳ್ಳಿ ಮಾಜಿ ಶಾಸಕ ಕೆ.ಅನ್ನದಾನಿ ಅವರು ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರ ಬಗ್ಗೆ ಅನಗತ್ಯ ಟೀಕೆ ಮಾಡಿರುವುದು ಸರಿಯಲ್ಲ. ಹಲವು ಸುಳ್ಳು ಮಾಹಿತಿ ನೀಡುವುದರ ಮೂಲಕ ಜಿಲ್ಲೆಯ ಜನತೆ ಹಾಗೂ ಮಳವಳ್ಳಿ ಜನತೆಯ ಮುಂದೆ ನಗೆಪಾಟಲಿಗೀಡಾಗಿದ್ದಾರೆ. 2023ರ ಚುನಾವಣೆಯಲ್ಲಿ ಮೂರು ದಿನಗಳ ಮುಂಚೆ ಕ್ಷೇತ್ರದಿಂದ ಪಲಾಯನ ಮಾಡಿ ಜನತಾದಳದ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಮಳವಳ್ಳಿ ತಾಲೂಕಿನ ಕೆರೆ ಹಾಗೂ ನೀರಿನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ತಮ್ಮ ಅವಧಿಯಲ್ಲಿ ಆಗಿರುವ ಭ್ರಷ್ಟಾಚಾರ, ಅವ್ಯವಹಾರ, ಆಸ್ಪತ್ರೆಯಲ್ಲಿ ಹಾಗೂ ಇತರೆ ಕೆಟ್ಟ ವಾತಾವಾರಣ ಇವುಗಳನ್ನು ತಾಲೂಕಿನ ಜನತೆ ಗಮನಿಸಿದ್ದಾರೆ ಎಂದರು.
ಮುಖಂಡರಾದ ದೇಶಹಳ್ಳಿ ಮೋಹನ್ ಕುಮಾರ್, ರಾಮಕೃಷ್ಣ ಅಜ್ಜಹಳ್ಳಿ, ವಿಜಯಕುಮಾರ್, ಸಿ.ಆರ್.ರಮೇಶ್ ಚಿನಕುರಳಿ, ಬಿ.ಟಿ.ಗುರುರಾಜ್ ಹಾಜರಿದ್ದರು.