- ನಗರಸಭೆ ಪ್ರಗತಿ ಪರಿಶೀಲನಾ ಸಭೆ
- ಶಾಸಕ ರವಿಕುಮಾರ್ ಗಣಿಗ ಸೇರಿದಂತೆ ಹಲವರು ಭಾಗಿ
ಮಂಡ್ಯ: ನಗರದಲ್ಲಿ 23 ವಾರ್ಡ್‌ಗೆ ಪ್ರತಿದಿನ ಕುಡಿಯುವ ನೀರು ಪೂರೈಕೆ ಮಾಡುವ ಸಂಬಂಧ ಯೋಜನೆ ರೂಪಿಸಲು ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರಸಭೆಯ ಎನ್.ಧರಣಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ 12 ವಾರ್ಡ್‌ಗೆ ಪ್ರತಿದಿನ ಕುಡಿಯುವ ನೀರು ಸರಬರಾಜಾಗುತ್ತಿದೆ. ಉಳಿದಂತೆ 23 ವಾರ್ಡ್‌ಗೆ ಈಗ ಎರಡು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ನೀರು ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಸರ್ವೇ ಮಾಡಲಾಗುತ್ತಿದೆ. ಇನ್ನು ಕೆಎಚ್‌ಬಿ ಬಡಾವಣೆಗೆ ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಏಳು ಜನ ಗುತ್ತಿಗೆದಾರರು ಬಿಡ್ ಸಲ್ಲಿಕೆ ಮಾಡಿದ್ದಾರೆ ಎಂದರು.
ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಹಾಗೂ ನೀರು ಪೋಲು ಆಗದಂತೆ ಕ್ರಮ ವಹಿಸಿ. ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ 585 ಕೊಳವೆ ಬಾವಿಗಳಿದ್ದು, ಅಲ್ಲಿನ ನೀರಿನ ಗುಣಮಟ್ಟ ಹಾಗೂ ಇಳುವರಿಯನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಕುಡಿಯುವ ನೀರನ್ನು ಉನ್ನತಿಕರಣ ಮಾಡುವ ನಿಟ್ಟಿನಲ್ಲಿ ಸರ್ವೇ ಮಾಡಲು ಏಜೆನ್ಸಿಗೆ ಸೂಚನೆ ನೀಡಲಾಗಿದೆ. ನಗರಸಭೆಯಿಂದ ಶೇ.25ರಷ್ಟು ಹಣ ಬಿಡುಗಡೆ ಮಾಡಬೇಕು ಎಂದರು.
ತರಕಾರಿ ಮಾರುಕಟ್ಟೆ ಈಗಾಗಲೇ ಉದ್ಘಾಟನೆಯಾಗಿದ್ದು, 126 ಮಳಿಗೆ ನಿರ್ಮಾಣವಾಗಿದೆ. ಹಿಂದೆ ಮಳಿಗೆ ನಿರ್ವಹಣೆ ಮಾಡುತ್ತಿದ್ದವರನ್ನು ಪರಿಶೀಲಿಸಲಾಗುತ್ತಿದೆ. ಮಳಿಗೆ ನಿರ್ಮಾಣಕ್ಕೆ ಮುನ್ನ ಇದ್ದವರಿಗೆ ಕೊಡಬೇಕೆಂದು ಅಂದಿನ ನಗರಸಭೆ ಸಾಮಾನ್ಯಸಭೆಯಲ್ಲಿ ನಿರ್ಣಯವಾಗಿದೆ. ಆದರೆ 174 ಜನ ಹೆಸರು ನೋಂದಣಿಯಾಗಿದೆ. ಆದ್ದರಿಂದ ಕೊರತೆಯಾಗದಂತೆ ನೋಡಿಕೊಳ್ಳಲು ದಾಖಲೆ ಪರಿಶೀಲನೆ ಮಾಡಲಾಗುವುದು. ನಂತರ ಮಳಿಗೆ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಹಾಕಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಅಧಿಕೃತವಾಗಿ ಸ್ಥಳ ಗುರುತಿಸಿ ಶುಲ್ಕ ಪಾವತಿಸಿಕೊಂಡು ಜಾಹೀರಾತು ಅಳವಡಿಸುವಂತೆ ಕ್ರಮ ವಹಿಸಬೇಕು. ಸಿಎಂ ನಿಧಿ ಯೋಜನೆಯಡಿ ರಸ್ತೆ ಕಾಮಗಾರಿಗಳನ್ನು ಟೆಂಡರ್ ಕರೆದು ಶೀಘ್ರದಲ್ಲೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಆಗುತ್ತಿದೆ ಎಂದರು.
ಸಭೆಯಲ್ಲಿ ಪೌರಾಯುಕ್ತೆ ಯು.ಪಿ.ಪಂಪಶ್ರೀ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಆಯುಕ್ತ ಕೃಷಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಇಂಜಿನಿಯರ್ ಪ್ರತಾಪ್ ಉಪಸ್ಥಿತರಿದ್ದರು.
ಆಡಳಿತ ಅನುಮೋದನೆ ಬಾಕಿ
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ, ನಗರದ ವಿ.ವಿ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಅದಕ್ಕೆ ನಾಲ್ಕು ಕೋಟಿ ರೂ ಅನುದಾನದ ಅವಶ್ಯಕತೆ ಇದೆ. ಮುಖ್ಯವಾಗಿ ವಿ.ವಿ ರಸ್ತೆಯನ್ನು ವಾಹನ ಮುಕ್ತವನ್ನಾಗಿಸುವುದಾಗಿದೆ. ಜತೆಗೆ ಫುಟ್‌ಪಾತ್ ಅಭಿವೃದ್ಧಿಯಾಗಬೇಕಿದೆ. ಈ ಸಂಬಂಧ ಯೋಜನೆ ಅನುಷ್ಠಾನಕ್ಕೆ ಆಡಳಿತ ಅನುಮೋದನೆ ಬಾಕಿ ಎಂದರು.
ಇದಲ್ಲದೆ, ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ರಸ್ತೆ ಹಾಗೂ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿಯನ್ನು 10 ಕೋಟಿ ರೂ ವೆಚ್ಚದಲ್ಲಿ ಮಾಡಲಾಗುವುದು. ಜತೆಗೆ ಸೈಕಲ್ ಪಾತ್ ಕೂಡ ಇರಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಉತ್ತಮ ಕರ್ತವ್ಯ ನಿರ್ವಹಣೆಗೆ ಅಭಿನಂದನೆ
ಜಿಲ್ಲಾದ್ಯಂತ ಜನಗಣತಿ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ಮಂಡ್ಯ ನಗರ ವ್ಯಾಪ್ತಿಯಲ್ಲಿ 261 ಬ್ಲಾಕ್‌ನಲ್ಲಿ ಜನಗಣತಿ ಮಾಡಲಾಗುತ್ತಿದೆ. ಮೊದಲನೇ ಹಂತವಾದ ಮನೆಗಳ ಪಟ್ಟಿ ಮಾಡುವ ಪ್ರಕ್ರಿಯೆಯನ್ನು ನಿಗದಿತ ಅವಧಿಗಿಂತ ಮುನ್ನವೇ ಅಂದರೆ ಮೇ 5ರೊಳಗೆ ಪೂರ್ಣಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡಿದ ಮೇಲ್ವಿಚಾರಕರು ಹಾಗೂ ಗಣತಿದಾರರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸುವಂತಿಲ್ಲ
ನಗರದಲ್ಲಿ ಎಲ್ಲೆಂದರಲ್ಲಿ ಅದರಲ್ಲಿಯೂ ಫುಟ್‌ಪಾತ್ ಮೇಲೆ ವಾಹನ ಪಾರ್ಕಿಂಗ್ ಮಾಡುವ ವಿಚಾರದ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಜೆಸಿಬಿ ಸೇರಿದಂತೆ ದೊಡ್ಡ ವಾಹನಗಳನ್ನು ಇಡೀ ದಿನ ಫುಟ್‌ಪಾತ್ ಮೇಲೆ ನಿಲ್ಲಿಸುತ್ತಾರೆ. ಅವರಿಗೆ ಅನುಮತಿ ನೀಡಿದ್ಯಾರು?. ವಾಹನಗಳನ್ನು ನಿಲ್ಲಿಸಲೆಂದು ಪ್ರತ್ಯೇಕ ಸ್ಥಳ ನಿಗದಿಪಡಿಸಲಾಗಿದೆ. ಅಲ್ಲಿಯೇ ಪಾರ್ಕಿಂಗ್ ಮಾಡಬೇಕು. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ವಹಿಸಬೇಕು. ಇನ್ನು ಮುಂದೆ ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಆದರೂ ಪಾಲನೆ ಮಾಡದಿದ್ದರೆ ದಂಡ ವಿಧಿಸಿ. ಮೂರ‌್ನಾಲ್ಕು ಬಾರಿ ದಂಡ ಹಾಕಿದರೆ ಅವರೇ ಸರಿದಾರಿಗೆ ಬರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.