ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಮಳೆ ಇಲ್ಲದೇ ಹಾನಿಯಾಗಿರುವ ಬೆಳೆಯನ್ನು ಭಾನುವಾರ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನ ಪರಿಷತ್ ಸದಸ್ಯ ಬಿ.ಎಸ್.ಶಿವಣ್ಣ, ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಒ ಕೆ.ಆರ್. ನಂದಿನಿ ಇದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ
ಕಿರುಗಾವಲು ಹೋಬಳಿ ವಿವಿಧ ಗ್ರಾಮಗಳಲ್ಲಿ ಬರ ಪರಿಶೀಲನೆ
ಮಳವಳ್ಳಿ:
ಮಳೆ ಕೊರತೆಯಿಂದ ತಾಲೂಕಿನಲ್ಲಿ ಉಂಟಾಗಿರುವ ಬೆಳೆ ನಷ್ಟವನ್ನು ಖುದ್ದಾಗಿ ವೀಕ್ಷಿಸಲು ಭಾನುವಾರ ಕಿರುಗಾವಲು ಹೋಬಳಿ ವಿವಿಧ ಗ್ರಾಮಗಳಲ್ಲಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರ ಸ್ವಾಮಿ ಅವರು ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ತಾಲೂಕಿನ ರಾಗಿಬೊಮ್ಮನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ತೆರಳಿದ ಸಚಿವರು, ಮಳೆ ಇಲ್ಲದೆ ಒಣಗಿರುವ ರಾಗಿ, ಜೋಳ ಹಾಗೂ ಇತರೆ ಬೆಳೆಗಳನ್ನು ವೀಕ್ಷಿಸಿದರು. ನಂತರ ಬಂಡೂರು-ದಡದಪುರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ, ಬಿತ್ತನೆ ಮಾಡಲಾಗದೆ ಬರಿದಾಗಿರುವ ಹೊಲಗಳು ಮತ್ತು ಬೆಳೆ ನಷ್ಟದ ಪ್ರಮಾಣವನ್ನು ಪರಿಶೀಲಿಸಿದ ನಂತರ ರೈತರೊಂದಿಗೆ ಮಾತನಾಡಿ, ಅವರ ಸಂಕಷ್ಟಗಳನ್ನು ಆಲಿಸಿದರು.
ಬರ ಅಧ್ಯಯನ ಪ್ರವಾಸ ಮುಗಿದ ನಂತರ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಂತೆ ಮಂಡ್ಯ ಜಿಲ್ಲೆಯಲ್ಲೂ ಮುಂಗಾರು ಮಳೆ ವಿಳಂಬದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಮಳವಳ್ಳಿ ತಾಲೂಕಿನ ಕಿರುಗಾವಲು ಹೋಬಳಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ರಾಗಿ, ಜೋಳ ಸೇರಿದಂತೆ ಶೇ.70ಕ್ಕೂ ಹೆಚ್ಚು ಬೆಳೆಗಳು ಹಾನಿಗೊಳಗಾಗಿವೆ. ರೈತರು ಬಿತ್ತನೆಗಾಗಿ ಮಾಡಿದ ಖರ್ಚು, ಸಾಲವೆಲ್ಲವೂ ನಷ್ಟವಾಗಿದೆ. ತಕ್ಷಣವೇ ಜಿಲ್ಲಾಡಳಿತದಿಂದ ಬೆಳೆ ಸಮೀಕ್ಷೆ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇನೆ ಎಂದರು.
ರೈತರಿಗೆ ಪರಿಹಾರ ಕೊಡಿಸುವುದು ಸರ್ಕಾರದ ಆದ್ಯತೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಮಾತನಾಡಿ, ನನ್ನ ಕ್ಷೇತ್ರದ ರೈತರ ನೋವು ನನ್ನ ನೋವು. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ನಾನು ಸಚಿವನಾದ ಮೊದಲ ದಿನವೇ ಬರ ಪರಿಶೀಲನೆಗೆ ಬಂದಿದ್ದೇನೆ ಎಂದ ಅವರು, ರೈತರ ಪರವಾಗಿ ಸರ್ಕಾರದ ಮುಂದೆ ಮಾತನಾಡುತ್ತೇನೆ. ಬೆಳೆ ನಷ್ಟ ಪರಿಹಾರ. ಸಾಲ ಮನ್ನಾ ಸೇರಿದಂತೆ ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ನಷ್ಟದ ವರದಿ ಸಿದ್ಧಪಡಿಸಬೇಕು. ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ನೇರ ಸಂಪರ್ಕದಲ್ಲಿರಬೇಕು. ಯಾವುದೇ ರೈತ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳದಂತೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಪರಿಷತ್ ಸದಸ್ಯ ಬಿ.ಎಸ್.ಶಿವಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಆರ್.ನಂದಿನಿ ಸೇರಿದಂತೆ ಕೃಷಿ, ತೋಟಗಾರಿಕೆ, ಕಂದಾಯ ಮತ್ತು ಇತರೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.