ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ

 ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ತಾಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಕೆ.ಎಂ.ಉದಯ್, ದಿನೇಶ್‌ಗೂಳಿಗೌಡ, ಚಲುವರಾಜು, ಅಣ್ಣೂರು ರಾಜೀವ್, ಪಿ.ಸಂದರ್ಶ, ಕದಲೂರು ರಾಮಕೃಷ್ಣ, ಕಂಠಿ ಸುರೇಶ್ ಇದ್ದರು.
ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ತಾಲೂಕು ಬ್ಲಾಕ್ ಕಾಂಗ್ರೇಸ್ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು. ಕೆ.ಎಂ.ಉದಯ್, ದಿನೇಶ್‌ಗೂಳಿಗೌಡ, ಚಲುವರಾಜು, ಅಣ್ಣೂರು ರಾಜೀವ್, ಪಿ.ಸಂದರ್ಶ, ಕದಲೂರು ರಾಮಕೃಷ್ಣ, ಕಂಠಿ ಸುರೇಶ್ ಇದ್ದರು.
Published on
ಮದ್ದೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ಜಿಲ್ಲೆಗೆ ಬಿಡುಗಡೆಗೊಳಿಸುವ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮದ್ದೂರು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆ ಪುನರಾರಂಭ ಮತ್ತು ಪುನಶ್ವೇತನ ಸಂಬಂಧ ಈಗಾಗಲೇ ನೂರಾರು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಡಕಿಲ್ಲದೆ ಕಾರ್ಖಾನೆ ಕಬ್ಬು ಅರೆಯಲು ಶಾಶ್ವತ ಯೋಜನೆ ರೂಪಿಸಿರುವುದಾಗಿ ಹೇಳಿದರು.
ಈ ಭೂಮಿ ಇರುವವರೆವಿಗೂ ಶಾಶ್ವತವಾಗಿ ಉಳಿಯುವ ಕೃಷಿ ವಿಶ್ವವಿದ್ಯಾಲಯವನ್ನು ಮಂಡ್ಯಕ್ಕೆ ಮಂಜೂರು ಮಾಡಿಸಿದ್ದು ಇದರಲ್ಲೂ ವಿರೋಧ ಪಕ್ಷದವರು ತಪ್ಪು ಹುಡುಕುವ ಮೂಲಕ ಸಲ್ಲದ ಟೀಕೆಗೆ ಮುಂದಾಗಿದ್ದಾರೆಂದು ದೂರಿದರು.
ಐದು ಗ್ಯಾರಂಟಿ ಯೋಜನೆಗಳಡಿ ಗ್ರಾಮೀಣ ಭಾಗದ ಜನರಿಗೆ ಪಕ್ಷಾತೀತವಾಗಿ ಸರ್ಕಾರದ ಅನುಷ್ಠಾನಗಳನ್ನು ತಲುಪಿಸುತ್ತಿದ್ದು ಜತೆಗೆ ಕೃಷಿ ಇಲಾಖೆ ವತಿಯಿಂದ 83 ಲಕ್ಷ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಣೆ, ಬೆಳೆಹಾನಿ ಸಂಬಂಧ ಸುಮಾರು ಎರಡು ಸಾವಿರ ಕೋಟಿ ರೂ.ಗಳನ್ನು ಕೃಷಿ ಇಲಾಖೆ ವತಿಯಿಂದ ಸರ್ಕಾರ ಸೂಕ್ತ ಪರಿಹಾರ ವಿತರಿಸಿರುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸತತ ಪ್ರಯತ್ನದಿಂದಾಗಿ ಸಾಕಷ್ಟು ಯೋಜನೆಗಳನ್ನು ಜಿಲ್ಲೆಗೆ ಮತ್ತು ರಾಜ್ಯಕ್ಕೆ ನೀಡಿದ್ದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವುದಾಗಿ ಆರೋಪಿಸಿದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಾವು ಸಂಸದರಾದರೆ ಮೇಕೆದಾಟು ಯೋಜನೆಯನ್ನು ಕೇವಲ ಐದು ನಿಮಿಷದಲ್ಲಿ ಅನುಮತಿ ಕೊಡಿಸುವುದಾಗಿ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ವರ್ಷಗಳಾದರೂ ಯಾವುದೇ ಯೋಜನೆಗೆ ಮುಂದಾಗದೆ ಹಾಸನ ಜಿಲ್ಲೆಗೆ ಐ.ಐ.ಟಿ ಕೇಂದ್ರಕ್ಕೆ ಒತ್ತಾಯಿಸುವವರ ಪರ ನಿಂತಿರುವುದಾಗಿ ದೂರಿದರು.
ಪ್ರಥಮ ಬಾರಿಗೆ ಆಯ್ಕೆಯಾಗಿರುವ ಕೆ.ಎಂ.ಉದಯ, ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ ಅವರಂತಹ ಶಾಸಕರು ಜಿಲ್ಲೆ ಸೇರಿದಂತೆ ಅವರ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಮುತ್ಸದ್ದಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿ.ಸಿ.ನಾಲಾ ಅಚ್ಚುಕಟ್ಟು ಭಾಗದ ರೈತರ ಅನುಕೂಲಕ್ಕಾಗಿ ಸಾವಿರಾರು ಕೋಟಿ ರೂ. ಹಣ ಮಂಜೂರು ಪಡೆದಿರುವುದಾಗಿ ಪ್ರಶಂಸಿದರು.
ಮದ್ದೂರು ತಾಲೂಕಿನ ಸೂಳೆಕೆರೆಯ 300 ಎಕರೆ, ಮದ್ದೂರು ಕೆರೆಯ 150 ಎಕರೆ ಅಕ್ರಮ ಒತ್ತುವರಿ ತೆರವಿಗೆ ಬದ್ಧತೆ ಮೆರೆದ ಶಾಸಕ ಕೆ.ಎಂ.ಉದಯ ಸಾವಿರಾರು ಎಕರೆ ಜಮೀನಿಗೆ ನಿರಂತರ ನೀರು ಒದಗಿಸಲು ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ಶಾಸಕ ಕೆ.ಎಂ.ಉದಯ ರವರು ನಿರಂತರವಾಗಿ ಶ್ರಮ ಮತ್ತು ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದು ಶೇ. 100ರಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಉತ್ತಮ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಾವೇ ಅಭ್ಯರ್ಥಿ ಎಂದು ಕೆಲಸ ಮಾಡುವುದರ ಮೂಲಕ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಶಾಸಕ ಕೆ.ಎಂ.ಉದಯ ಮಾತನಾಡಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಚಳಿಬಿಟ್ಟು ಕೆಲಸ ಮಾಡುವುದರ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಶ್ರಮಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ 1800 ಕೋಟಿ ರೂ.ಗಳ ಹೆಚ್ಚಿನ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹರಿದುಬಂದಿದ್ದು ಶಾಸಕ ಕೆ.ಎಂ.ಉದಯ ಅವರ ಪರಿಶ್ರಮ ಅಪಾರವೆಂದು ಒಟ್ಟಾರೆ ಜಿಲ್ಲೆಗೆ ಹತ್ತು ಸಾವಿರ ಕೋಟಿ ಈವರೆಗೆ ಅಭಿವೃದ್ಧಿ ಕಾರ್ಯಗಳಾಗಿರುವ ಬಗ್ಗೆ ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಮೋಹನ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಅಣ್ಣೂರು ರಾಜೀವ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶಂಕರೇಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ನಿರ್ದೇಶಕ ಹರೀಶ್‌ಬಾಬು, ಉದ್ಯಮಿ ಹಳ್ಳಿಕೆರೆ ಸತೀಶ್, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾಅರುಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net