ಮಿತವಾದ ನೀರು ಹಿತವಾದ ಬೆಳೆ

 ನಾಗೇಗೌಡ ಜಮೀನಿನಲ್ಲಿ ಅಡಿಕೆ ಮರ
ನಾಗೇಗೌಡ ಜಮೀನಿನಲ್ಲಿ ಅಡಿಕೆ ಮರ
Published on
ಮದ್ದೂರು: ಸಮಗ್ರ ಕೃಷಿಯಲ್ಲಿ ಯಶಸ್ವಿಯಾಗಿರುವ ತಾಲೂಕಿನ ತೊರೆಶೆಟ್ಟಿಹಳ್ಳಿ ನಿವಾಸಿ ಸಿ.ನಾಗೇಗೌಡ ಉತ್ತಮ ಆದಾಯ ಗಳಿಸುವ ಮೂಲಕ ಮಾದರಿ ರೈತರಾಗಿದ್ದಾರೆ.
ಎರಡೂವರೆ ಎಕರೆ ಜಮೀನಿನಲ್ಲಿ 500 ಅಡಿಕೆ ಮರ, 250 ತೆಂಗು, 500 ಬಾಳೆ ಸೇರಿದಂತೆ ಸೀಬೆ, ರಾಮಫಲ, ಸೀತಾಫಲ, ಬಟರ್ ಫ್ರೂಟ್ಸ್, ನುಗ್ಗೆಕಾಯಿ, ತೇಗದ ಮರಗಳನ್ನು ಬೆಳೆಯುವ ಮೂಲಕ ವಾರ್ಷಿಕವಾಗಿ ನಾಲ್ಕರಿಂದ ಐದು ಲಕ್ಷ ರೂ. ಹೆಚ್ಚು ಆದಾಯ ಕಾಣುತ್ತಿದ್ದಾರೆ.
ನಾಗೇಗೌಡ ಅವರು ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಖಾಸಗಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿತ್ತಾದರೂ ಕೃಷಿ ಮೇಲಿನ ವ್ಯಾಮೋಹದಿಂದ ಬೇಸಾಯದಲ್ಲಿ ತೊಡಗಿಕೊಂಡರು.
ಮೊದಲು ಒಟ್ಟು ಕುಟುಂಬದಲ್ಲಿದ್ದ ಸುಮಾರು 15 ಎಕರೆ ಜಮೀನಿನಲ್ಲಿ ಕುಟುಂಬದವರ ಸಹಕಾರದೊಂದಿಗೆ ಭತ್ತ, ರಾಗಿ, ಕಬ್ಬು, ರೇಷ್ಮೆ ಸೇರಿದಂತೆ ವಿವಿಧ ಬೆಳೆ ಬೆಳೆದು ಗಮನ ಸೆಳೆದಿದ್ದರು. ನಂತರ ವಿಭಾಗವಾದ ಕಾರಣ ಭಾಗಕ್ಕೆ ಬಂದ ಎರಡೂವರೆ ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮುಂದುವರಿಸಿದ್ದಾರೆ. ಹಲವು ವರ್ಷಗಳ ಹಿಂದೆ ಜಮೀನಿನಲ್ಲಿ ಗ್ರೀನ್‌ಹೌಸ್ ಹಾಕಿಕೊಂಡು ದಪ್ಪ ಮೆಣಸಿನಕಾಯಿ ಬೆಳೆ ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡಿ ಗಮನ ಸೆಳೆದಿದ್ದರು.
ತೊರೆಶೆಟ್ಟಳ್ಳಿ ಗ್ರಾಮ ಮಳೆಯಾಶ್ರಿತ ಪ್ರದೇಶವಾಗಿದ್ದರಿಂದ 2 ಬೋರ್‌ಬೆಲ್‌ಗಳನ್ನು ಕೊರೆಸಿಕೊಂಡು ಮಿತವಾದ ನೀರನಲ್ಲೇ ಜಮೀನು ಹಸಿರಿನಿಂದ ಕಂಗೊಳಿಸುವಂತೆ ಬೆಳೆ ಬೆಳೆದಿರುವುದು ಕೃಷಿ ಪ್ರೀತಿ ತೋರಿಸುತ್ತದೆ.
ಕೃಷಿಗೆ ಹೆಚ್ಚಿನ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಸಾವಯವ ಗೊಬ್ಬರ ಬಳಕೆ ಮಾಡುತ್ತಿರುವುದಿರಂದ ಭೂಮಿಯ ಫಲವತ್ತದೆ ಹೆಚ್ಚುವ ಜತೆಗೆ ಉತ್ತಮ ಫಸಲು ಬರುತ್ತಿದೆ.
ಅವಶ್ಯಕತೆ ಇದ್ದಾಗ ಮಾತ್ರ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಇಲ್ಲದಿದ್ದರೆ ಇವರೇ ಕೃಷಿ ಕೆಲಸ ಮಾಡುತ್ತಾರೆ. ಇವರ ಕೃಷಿ ಪ್ರೀತಿಗೆ ಪತ್ನಿ ಶೋಭಾ ನಾಗೇಗೌಡ, ಅಕ್ಕನ ಮಗ ನಾಗಲಿಂಗು ಸೇರಿದಂತೆ ಇಡೀ ಕುಟುಂದವರು ಸಾಥ್ ನೀಡುತ್ತಿದ್ದಾರೆ. ರೈತ ಸಿ.ನಾಗೇಗೌಡ ಅವರು ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲ ಪುತ್ರಿ ಎಸ್.ಎನ್.ಶಮಾ ಎಂಬಿಬಿಎಸ್ ಮುಗಿಸಿ(ಎಂಡಿ) ಡಾಕ್ಟರ್ ಆಫ್ ಮೆಡಿಸಿನ್ ವ್ಯಾಸಂಗ ಮಾಡುತ್ತಿದ್ದಾರೆ, ದ್ವಿತೀಯ ಪುತ್ರಿ ಎಸ್.ಎನ್.ಹಿತಾ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಮೀನು ಸಾಗಾಣೆ, ಜೇನು ಸಾಗಾಣೆೆ, ಮಾಡುವ ಚಿಂತನೆಯಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net