ಮೊಬೈಲ್‌ನಿಂದ ಮಕ್ಕಳ ಮನಸ್ಸು, ಸಮಯ ಹಾಳು

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜತೆಗೂಡಿ ಅನುಷಾ ಕರಿಬಸಯ್ಯ ಹಿರೇಮಠ ಉದ್ಘಾಟಿಸಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರದ ಬಿಜಿಎಸ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜತೆಗೂಡಿ ಅನುಷಾ ಕರಿಬಸಯ್ಯ ಹಿರೇಮಠ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಿ.ಬಿ.ಶ್ರೀಕಾಂತ್ ಬೇಸರ
  • ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ 81ನೇ ಜಯಂತ್ಯುತ್ಸವ, 13ನೇ ವರ್ಷದ ಸಂಸ್ಮರಣಾ ಮಹೋತ್ಸವ
ನಾಗಮಂಗಲ: ಮಕ್ಕಳಿಗೆ ಮಹಾಮಾರಿಯಾಗಿರುವ ಮೊಬೈಲ್ ಎಳೆಯ ಮನಸುಗಳನ್ನು ಆಕರ್ಷಿಸಿ ಸಮಯ, ಮನಸು ಎರಡನ್ನೂ ಹಾಳು ಮಾಡುತ್ತಿವೆ ಎಂದು ಸಮ್ಮೇಳನ ಸರ್ವಾಧ್ಯಕ್ಷ, ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲೆ 9ನೇ ತರಗತಿ ವಿದ್ಯಾರ್ಥಿ ಪಿ.ಬಿ.ಶ್ರೀಕಾಂತ್ ಹೇಳಿದರು.
ತಾಲೂಕಿನ ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಭವನದಲ್ಲಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಹಿಡಿದರೆ ದಂಡ ಹಾಕುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಈ ಆದೇಶವನ್ನು ಪಾಲಿಸಿದರೆ ಮಾತ್ರ ಯುವ ಪೀಳಿಗೆ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಖಾಸಗಿ ಶಾಲೆಗಳ ಪೈಪೋಟಿಯಿಂದ ಮುಚ್ಚುವ ಮತ್ತು ವಿಲೀನದ ಹಂತಕ್ಕೆ ತಲುಪಿರುವ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸಬಲೀಕರಣ ನಮ್ಮೆಲ್ಲರ ಜವಾಬ್ದಾರಿ. ಸರ್ಕಾರಿ ಶಾಲೆಗಳ ಭೌತಿಕ ಸೊಬಗು ಮೊದಲು ಆಕರ್ಷಣೀಯವಾಗಬೇಕಿದೆ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಬಿಎಲ್‌ಒ ಕೆಲಸ, ಎಲ್ಲ ಗಣತಿ ಕೆಲಸ ಎಂದು ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಶಿಕ್ಷಕರಿಗೆ ಪಠ್ಯೇತರ ಹೊರೆ ನೀಡಿ ಗುಣಮಟ್ಟದ ಶಿಕ್ಷಣವನ್ನು ಕೊಡಿ ಎಂದರೆ ಹೇಗೆ ಸಾಧ್ಯ. ಪ್ರಾಥಮಿಕ ಶಾಲಾ ಶಿಕ್ಷಕರ ಗೋಳು ಕೇಳುವವರೇ ಇಲ್ಲದಿರುವುದು ಅತ್ಯಂತ ವಿಪರ್ಯಾಸ. ಹಾಗಾಗಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಯೋಚನೆ ಕೈಬಿಟ್ಟು ಶಾಲೆಗಳ ಸಬಲೀಕರಣ ಮಾಡಿ ಎಂಬ ಅಹವಾಲವನ್ನು ಸರ್ಕಾರದ ಮುಂದಿಡುತ್ತಿದ್ದೇನೆ ಎಂದು ತಿಳಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿದ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಜಕ್ಕನಕಟ್ಟಿಯ ಕಿತ್ತೂರು ರಾಣಿಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಅನುಷಾ ಕರಿಬಸಯ್ಯ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ನೈತಿಕ, ಅಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕ ಗುಣಗಳನ್ನು ಬೆಳೆಸಬೇಕಿದೆ. ಅವೆಲ್ಲವನ್ನೂ ಪ್ರತಿಯೊಬ್ಬ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಮಾನವೀಯತೆ, ಪ್ರಾಮಾಣಿಕತೆ, ಸಹಾನುಭೂತಿ, ಪ್ರೀತಿ, ಶಕ್ತಿ, ಸಹಿಷ್ಣುತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಶ್ರಮ ಪಟ್ಟಾಗ ಮಾತ್ರ ಖಂಡಿತ ಯಶಸ್ಸು ಸಿಗುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳಾಡಿದರು. ಮೈಸೂರಿನ ಪೂರ್ಣಚೇತನ ಶಾಲೆ ನಾಲ್ಕನೇ ತರಗತಿ ವಿದ್ಯಾರ್ಥಿನಿ ಡಾ.ಪೃಥ್ವಿ ಪಿ.ಅದ್ವೈತ್ , ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ವಾಗ್ಮಿ ಪ್ರೊ.ಕೃಷ್ಣೇಗೌಡ ಮತ್ತು ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಬೆಂಗಳೂರಿನ ಗೋಸಾಯಿ ಮಠದ ಪೀಠಾಧ್ಯಕ್ಷ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ, ಮಕ್ಕಳ ಸಾಹಿತ್ಯ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ. ಶಿವರಾಮು ಇತರು ಇದ್ದರು.
ಇದಕ್ಕೂ ಮೊದಲು ಶಿವಮೊಗ್ಗದ ಗುರುಪುರ ಬಿಜಿಎಸ್ ಆಂಗ್ಲಮಾಧ್ಯಮ ಶಾಲೆಯ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಎಸ್.ಪವನ್ ಮತ್ತು ಎಸ್.ಪುನೀತ್ ರಾಷ್ಟ್ರಧ್ವಜಾರೋಹಣ ಮಾಡಿದರು. ಬಿಜಿಎಸ್ ಪಬ್ಲಿಕ್‌ಶಾಲೆಯ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಯೋಗ ವಿದ್ಯಾರ್ಥಿ ಬಿ.ಕೆ.ಸಿಂಚನಾ ನಾಡಧ್ವಜಾರೋಹಣ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಮೈಸೂರಿನ ನಾದಶ್ರೀ ಆರ್.ಭಟ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ, ಬೆಂಗಳೂರಿನ ಎನ್.ಸೃಜನಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು ಶಿವಮೊಗ್ಗ ಪುರಲೆ ಗುರುಪುರದ ಬಿಜಿಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಮಾನ್ವಿ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net