ಜಿ.ಹೊಸಹಳ್ಳಿ ರಸ್ತೆಗೆ ಅಭಿವೃದ್ಧಿ ಭಾಗ್ಯ: ಹಲವು ವರ್ಷದ ಬಳಿಕ ಡಾಂಬರೀಕರಣ

 ಮಂಡ್ಯ ತಾಲೂಕು ಜಿ.ಹೊಸಹಳ್ಳಿ ಗ್ರಾಮದ ರಸ್ತೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.
ಮಂಡ್ಯ ತಾಲೂಕು ಜಿ.ಹೊಸಹಳ್ಳಿ ಗ್ರಾಮದ ರಸ್ತೆಗೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಚಾಲನೆ
  • ಎತ್ತಿನಗಾಡಿ ಮೂಲಕ ಗಣ್ಯರ ಮೆರವಣಿಗೆ
ಮಂಡ್ಯ: ಹಲವು ವರ್ಷದ ಬಳಿಕ ಮಂಡ್ಯ ವಿಧಾನಸಭಾ ಕ್ಷೇತ್ರದ ಜಿ.ಹೊಸಹಳ್ಳಿ ಗ್ರಾಮದ ರಸ್ತೆಗೆ ಅಭಿವೃದ್ಧಿ ಸ್ಪರ್ಶ ಸಿಕ್ಕಿದೆ. ಇದರೊಂದಿಗೆ ಆ ಭಾಗದ ಜನರ ಬೇಡಿಕೆಗೆ ಶಾಸಕ ಪಿ.ರವಿಕುಮಾರ್ ಗಣಿಗ ಸ್ಪಂದಿಸಿದ್ದಾರೆ.
ಚಂದಗಾಲು-ದೊಡ್ಡಹೊಸಗಾವಿ ಮುಖ್ಯರಸ್ತೆಯಿಂದ ಜಿ.ಹೊಸಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಹಾಳಾಗಿತ್ತು. ಹಲವು ವರ್ಷದಿಂದ ಡಾಂಬರೀಕರಣವಾಗದೇ ಸ್ಥಳೀಯರಿಗೆ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಅದರಂತೆ 1 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮಕ್ಕೆಂದು ಆಗಮಿಸಿದ ಶಾಸಕ ಪಿ.ರವಿಕುಮಾರ್ ಗಣಿಗ ಅವರನ್ನು ಗ್ರಾಮದ ಗೇಟ್‌ನಿಂದ ಜಿ.ಹೊಸಹಳ್ಳಿವರೆಗೆ ಬೈಕ್ ರ‌್ಯಾಲಿ ಮೂಲಕ ಕರೆತರಲಾಯಿತು. ಈ ವೇಳೆ ಸ್ವತಃ ಬೈಕ್ ಓಡಿಸುವ ಮೂಲಕ ಶಾಸಕರು ಗಮನಸೆಳೆದರು. ಅಂತೆಯೇ ಗ್ರಾಮದೊಳಗೆ ಆಗಮಿಸಿದಾಗ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಭೂಮಿ ಪೂಜೆ ಆಯೋಜಿಸಿದ್ದ ಸ್ಥಳದವರೆಗೆ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪಿ.ರವಿಕುಮಾರ್ ಗಣಿಗ, ಬಸರಾಳು ಹೋಬಳಿ ವ್ಯಾಪ್ತಿಯಲ್ಲಿ 250 ಕೋಟಿ ರೂ.ಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಅಂತೆಯೇ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಅನುದಾನ ತಂದು ಅಭಿವೃದ್ಧಿ ಮಾಡಲಾಗುವುದು ಎಂದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಮಾತನಾಡಿ, ಸ್ಥಳೀಯರ ಮನವಿಗೆ ಸ್ಪಂದಿಸಿದ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ. ಈಗಾಗಲೇ ನಾಲೆಗಳ ಆಧುನೀಕರಣ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಹಲವು ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.
ತಾಪಂ ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ಕಾಂಗ್ರೆಸ್ ಮುಖಂಡ ಸಿದ್ಧಾರೂಢ ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ರಾಜು, ಮಾಜಿ ಸದಸ್ಯರಾದ ಶಿವಲಿಂಗಯ್ಯ, ಸೋಮು, ಚಿಕ್ಕಬೋರಯ್ಯ, ಪಟೇಲ್ ಪುಟ್ಟಸ್ವಾಮಿ, ಕುಮಾರ ಇತರರಿದ್ದರು.

ಕೋಣನಹಳ್ಳಿ ಕೆರೆ ಅಭಿವೃದ್ಧಿ
ಮಂಡ್ಯ ನಗರದ ಕಲ್ಲಹಳ್ಳಿಯಿಂದ ಕೋಣನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಮಂಡ್ಯ ನಗರದಿಂದ ಕೋಣನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಮಂಜೂರು ಮಾಡಿ ಗ್ರಾಮಸ್ಥರ ಸಹಕಾರದೊಂದಿಗೆ ಕೋಣನಹಳ್ಳಿ ಕೆರೆ ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ಮುಂದಿನ 50 ವರ್ಷ ವ್ಯವಸಾಯಕ್ಕೆ ಯಾವುದೇ ತೊಂದರೆ ಆಗದಂತೆ ಮಾಡಲಾಗುವುದು. ಇದಲ್ಲದೆ ಗ್ರಾಮದೊಳಗಿನ ರಸ್ತೆಯನ್ನು 25 ಲಕ್ಷ ರೂ ವೆಚ್ಚದಲ್ಲಿ ಡಾಂಬರೀಕರಣ ಮಾಡುತ್ತೇವೆ ಎಂದರು.
ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ಮುಡಾ ಮಾಜಿ ನಿರ್ದೇಶಕ ಎಂ.ಕೃಷ್ಣ, ವರದೇಗೌಡ, ಜಯರಾಮು, ಕಲ್ಲಹಳ್ಳಿ ಕೆ.ಎಸ್.ಆನಂದ್, ಗ್ರಾ.ಪಂ ಮಾಜಿ ಅಧ್ಯಕ್ಷ ಪಣಕನಹಳ್ಳಿ ಆನಂದ್, ಮಾಜಿ ಸದಸ್ಯ ಮಂಜು, ಕೆ.ಎನ್.ಗೋಪಾಲಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net