ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯ: ಶಾಸಕ ಪಿ.ರವಿಕುಮಾರ್ ಗಣಿಗ ಟೀಕೆ

ಶಾಸಕ ಪಿ.ರವಿಕುಮಾರ್ ಗಣಿಗ
ಶಾಸಕ ಪಿ.ರವಿಕುಮಾರ್ ಗಣಿಗ
Published on

ಪ್ರಮುಖ ಮುಖ್ಯಾಂಶಗಳು

  • ಎಚ್.ಡಿ.ದೇವೇಗೌಡರು ಹಾಗೂ ಸುಮಲತಾಗೆ ರಾಜ್ಯಸಭೆ ಟಿಕೆಟ್ ಕೊಡದೆ ಅನ್ಯಾಯ
  • ಜೆಡಿಎಸ್ ಮುಗಿಸಲು ಮೊಳೆ ಹೊಡೆಯುತ್ತಲೇ ಇದ್ದಾರೆಂದು ವ್ಯಂಗ್ಯ
ಮಂಡ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಂಸದೆ ಸುಮಲತಾ ಅವರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡದೇ ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ. ಅಂತೆಯೇ ಜೆಡಿಎಸ್ ಮುಗಿಸಲು ಮೊಳೆ ಹೊಡೆಯುತ್ತಲೇ ಇದ್ದಾರೆ. ಯಾವಾಗ ಕೊನೆ ಮೊಳೆ ಹೊಡೆಯುತ್ತಾರೋ ಗೊತ್ತಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅಸ್ಥಿತ್ವವನ್ನು ಹಂತ ಹಂತವಾಗಿ ಬಿಜೆಪಿ ಕಸಿದುಕೊಳ್ಳುತ್ತಿದೆ. ಬಿಸ್ಕೆಟ್ ರೀತಿ ಒಂದು ಕೇಂದ್ರ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಜೆಡಿಎಸ್‌ನವರು ಎಚ್ಚೆತ್ತುಕೊಳ್ಳದಿದ್ದರೇ ರಾಜಕೀಯವಾಗಿ ಸರ್ವನಾಶ ಮಾಡುತ್ತಾರೆ ಎಂದರು.
ಎಚ್.ಡಿ.ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ಕೊಡದಿರುವುದು ವೈಯಕ್ತಿಕವಾಗಿ ಬೇಸರವಾಗಿದೆ. ದೇವೇಗೌಡರ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೋರಿಸುವ ಪ್ರೀತಿ ನಾಟಕ. ಅದು ಕೇವಲ ಟಿವಿ, ಕ್ಯಾಮರಾಗೆ ಕೊಡುವ ಪೋಸ್ ಅಷ್ಟೇ. ಪ್ರಧಾನಿ ಮೋದಿ ನಟ ಭಯಂಕರ ಎಂದು ಟೀಕಿಸಿದರು.
ಒಕ್ಕಲಿಗರನ್ನ ಬಿಜೆಪಿಯವರು ಮುಗಿಸಿದ್ದಾರೆ. ಅಂಬರೀಶ್ ಅವರ ಕುಟುಂಬಕ್ಕೂ ಕೂಡ ಅನ್ಯಾಯ ಮಾಡಿದ್ದಾರೆ. ಕುಮಾರಸ್ವಾಮಿ ಹಾಲಿ ಸಿಎಂ ಆಗಿದ್ದಾಗಲೇ ನಿಖಿಲ್ ಅವರನ್ನು ಪಕ್ಷೇತರವಾಗಿ ಸ್ಪರ್ಧಿಸಿದ ಸುಮಲತಾ ಸೋಲಿಸಿದ್ದರು. ಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗ ಸುಮಲತಾ ತ್ಯಾಗಮಯಿಯಾಗಿ ಕ್ಷೇತ್ರ ಬಿಟ್ಟುಕೊಟ್ಟರು. ಅಂತಹವರಿಗೆ ಬಿಜೆಪಿ ಅನ್ಯಾಯ ಮಾಡಿರುವುದು ಖಂಡನೀಯ. ಆದರೆ ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್ ಗೌರವಯುತವಾಗಿ ನಡೆದುಕೊಂಡಿದೆ. ಲೋಕಸಭಾ ಚುನಾವಣೆ ಸೋತಾಗಲೂ ಕಾಂಗ್ರೆಸ್ ರಾಜ್ಯಸಭೆಗೆ ಕಳುಹಿಸಿದ್ದರು. ಅವರ ಅನುಭವ ಅಗತ್ಯ ಎಂದು ಸೋನಿಯಾಗಾಂಧಿ ರಾಜ್ಯಸಭೆಗೆ ಆಯ್ಕೆ ಮಾಡಿದ್ದರು. ಆದರೆ ಬಿಜೆಪಿ ಅಂತಹ ಮಹನೀಯರಿಗೆ ಟಿಕೆಟ್ ತಪ್ಪಿಸಿದ್ದಾರೆ. ಇದು ಒಕ್ಕಲಿಗರಿಗೆ ಮಾಡಿದ ಅನ್ಯಾಯ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net