ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ನೀರಾವರಿ ಅಭಿವೃದ್ಧಿ ಯೋಜನೆಗಳಿಗಾಗಿಯೇ 1 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ
MLA
ಮದ್ದೂರು ತಾಲೂಕಿನ ಮಾರಸಿಂಗನ ಹಳ್ಳಿ ಬಳಿ ಶಿಂಷಾ ನದಿಗೆ ಅಡ್ಡಲಾಗಿ 4.90 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್, ದಿನೇಶ್ ಗೂಳಿಗೌಡ ಭೂಮಿ ಪೂಜೆ ನೆರವೇರಿಸಿದರು. ಮಾರಸಿಂಗನಹಳ್ಳಿ ರಾಮಚಂದ್ರು, ಗೂಳೇಶ್, ಮಹಾಲಿಂಗು ಇದ್ದರು.pooje
Published on: 

ಮದ್ದೂರು: ತಾಲೂಕಿನಲ್ಲಿ ನೀರಾವರಿ ಅಭಿವೃದ್ಧಿ ಯೋಜನೆಗಳಿಗಾಗಿಯೇ 1 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ತಂದು ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ತಾಲೂಕಿನ ಮಾರಸಿಂಗನಹಳ್ಳಿ ಬಳಿ ಶಿಂಷಾ ನದಿಗೆ ಅಡ್ಡಲಾಗಿ 4.90 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಿಂಷಾ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣದಿಂದಾಗಿ ನೀರು ಸಂಗ್ರಹಣೆ ಹೆಚ್ಚಾಗುವುದರಿಂದ ರೈತರಿಗೆ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇ ಅಂತರ್ಜಲ ಮಟ್ಟ ಕೂಡ ಹೆಚ್ಚಾಗುತ್ತದೆ ಎಂದ ಅವರು, ಏತ ನೀರಾವರಿ ಯೋಜನೆಯ ಮೂಲಕ ಚೆಕ್ ಡ್ಯಾಂ ಬಳಿ ಸಂಗ್ರಹವಾದ ನೀರನ್ನು ಆತಗೂರು ಹೋಬಳಿ, ಕೊಪ್ಪ ಹೋಬಳಿಗೆ ಸೇರಿದ 50ಕ್ಕೂ ಹೆಚ್ಚಿನ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಚೆಕ್ ಡ್ಯಾಮ್ ಬಳಿ ರೈತರ ಎತ್ತಿನ ಗಾಡಿಗಳು, ಟ್ರಾೃಕ್ಟರ್‌ಗಳು ಸೇರಿದಂತೆ ವಾಹನಗಳು ಸಂಚರಿಸಲು ಕಿರು ಸೇತುವೆ ಕೂಡ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರೈತರಿಗೆ ಬೆನ್ನೆಲುಬಾಗಿರುವ ಶಿಂಷಾ ನದಿಯ ಬಲದಂಡೆ ನಾಲೆಗೆ ನಾಲ್ವಡಿ ಹಾಗೂ ಎಡದಂಡೆ ನಾಲೆಗೆ ಎಸ್.ಎಂ.ಕೃಷ್ಣ ಅವರ ಹೆಸರು ನಾಮಕರಣ ಮಾಡಲು ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್) ನಿರ್ಣಯಿಸಿದೆ. ಈ ಬಗ್ಗೆ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕಳೆದ ವಾರ ಆಯೋಜಿಸಿದ್ದ ಕಾವೇರಿ ನೀರಾವರಿ ನಿಗಮ ನಿಯಮಿತ ಮಂಡಳಿ ಸಭೆಯಲ್ಲಿ ಹೆಸರು ನಾಮಕರಣ ಮಾಡಲು ಅನುಮೋದನೆ ಸಿಕ್ಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶೀಘ್ರದಲ್ಲೇ ಅಧಿಕೃತವಾಗಿ ಈ ವಿಚಾರವನ್ನು ಪ್ರಕಟಿಸಲಿದ್ದಾರೆ ಎಂದರು.

ತಗ್ಗಳಿ ಅಣೆಕಟ್ಟೆಯಿಂದ 21 ಕಿ.ಮೀ. ಉದ್ದವಿರುವ ಬಲದಂಡೆ ನಾಲೆಯು ಕೀಳಘಟ್ಟ, ಸೀನಪ್ಪನ ದೊಡ್ಡಿ, ಎನ್.ಕೋಡಹಳ್ಳಿ, ನಿಲುವಾಗಿಲು, ಮುದಿಗೆರೆ, ಮಾರಸಿಂಗನಹಳ್ಳಿ, ಹೊಸಕೆರೆ, ಕೊತ್ತನಹಳ್ಳಿ, ಚಾಪುರದೊಡ್ಡಿ, ಚಾಮನಹಳ್ಳಿ ಗ್ರಾಮಗಳ 3250 ಎಕರೆಗೂ ಅಧಿಕ ಕೃಷಿಭೂಮಿಗೆ ನೀರು ಒದಗಿಸುತ್ತಿದೆ ಎಂದರು. ಮುಖಂಡರಾದ ಮಾರಸಿಂಗನಹಳ್ಳಿ ರಾಮಚಂದ್ರು, ಗೂಳೇಶ್, ಯರಗನಹಳ್ಳಿ ಮಹಾಲಿಂಗು ಇತರರು ಇದ್ದರು.