ಮಂಡ್ಯ: ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಡಾ.ಮಹೇಶ್ ಜೋಶಿ ವಿರುದ್ಧ ಹಲವು ಆರೋಪ ಕೇಳಿಬಂದಿವೆ. ಈ ಸಂಬಂಧ ಸಾಹಿತ್ಯ ಪರಿಷತ್‌ನಲ್ಲಿ ನಡೆದಿರುವ ಎಲ್ಲ ಹಣಕಾಸು ವ್ಯವಹಾರಗಳ ಬಗ್ಗೆ ಸರ್ಕಾರ ವರದಿ ಪಡೆದಿದೆ. ಆದರೆ ವರದಿ ಬಗ್ಗೆ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ತಪ್ಪು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಿ. ಇದು ಸಾರ್ವಜನಿಕರ ಒತ್ತಾಯವಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಹೇಳಿದರು.
ಡಾ.ಮಹೇಶ್ ಜೋಶಿ ಹಾಗೂ ಮಂಡ್ಯ ವಿಶ್ವವಿದ್ಯಾಲಯದ ಬಗ್ಗೆ ಚರ್ಚಿಸಲು ನಗರದ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ, ಸಾಹಿತ್ಯಾಸಕ್ತರು, ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಡೆದಿದ್ದ 2.50 ಕೋಟಿ ರೂ. ಅನುದಾನಕ್ಕೆ ಲೆಕ್ಕವೇ ನೀಡಿಲ್ಲ. ಸರ್ಕಾರವೇ ಸಮ್ಮೇಳನ ನಡೆಸಬಹುದಿತ್ತು. ಅಧ್ಯಕ್ಷರಿಗೆ ಹಣ ನೀಡುವ ಅವಶ್ಯಕತೆ ಇರಲಿಲ್ಲ. ಡಾ.ಮಹೇಶ್‌ಜೋಶಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ವಿವಿಧ ಸಂಘಟನೆಗಳ ಮುಖಂಡರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಬೇರೆಡೆ ನಿರ್ಮಾಣ ಮಾಡಲಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ನಿರ್ಮಾಣ ಮಾಡಲು ಮುಂದಾಗಿರುವ ಕನ್ನಡ ಭವನವನ್ನು ಬೇರೆಡೆ ಎರಡು ಎಕರೆ ಜಾಗ ಗುರುತಿಸಿ ನಿರ್ಮಾಣ ಮಾಡಲಿ. ಕ್ರೀಡಾಂಗಣದ ಆವರಣದಲ್ಲಿ ನಿರ್ಮಾಣ ಮಾಡಿದರೆ ಸಮಸ್ಯೆಯಾಗಲಿದೆ. ಕೇವಲ ನಗರ ಕೇಂದ್ರೀಕರಣ ಮಾಡುವುದನ್ನು ಬಿಟ್ಟು ಹೊರ ವಲಯಕ್ಕೂ ವಿಸ್ತರಿಸಬೇಕು ಎಂದು ಹೇಳಿದರು.
ಮಂಡ್ಯ ನಗರ ಸೇರಿದಂತೆ ತಾಲೂಕು ಮಟ್ಟದಲ್ಲಿಯೂ ಉತ್ತಮ ಸಭಾಂಗಣಗಳಿಲ್ಲ. ಯಾವುದೇ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ. ಕಲಾಮಂದಿರ ಮತ್ತೆ ದುರಸ್ತಿಗೆ ಬಂದು ನಿಂತಿದೆ. ರೈತಸಭಾಂಗಣ ಇನ್ನೂ ಕಾಮಗಾರಿ ನಡೆಯುತ್ತಿದೆ. ಅಂಬೇಡ್ಕರ್ ಭವನದಲ್ಲಿ ಬಾಡಿಗೆ ಹೆಚ್ಚಿದೆ. ಹೀಗಿರುವಾಗ ಸಾಂಸ್ಕೃತಿಕವಾಗಿ ಕಾರ್ಯಕ್ರಮ ಮಾಡಲು ಉತ್ತಮ ಆಡಿಟೋರಿಯಂ ಇಲ್ಲ. ಇದರ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿ.ಹರ್ಷ ಪಣ್ಣೇದೊಡ್ಡಿ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಸಾಹಿತಿ ಕೃಷ್ಣ ಸ್ವರ್ಣಸಂದ್ರ, ಕರವೇ ರಾಜ್ಯ ಉಪಾಧ್ಯಕ್ಷ ಮ.ಸೋ.ಚಿದಂಬರ್, ತಾಲೂಕು ಅಧ್ಯಕ್ಷ ತೇಜುಗೌಡ, ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮತ್ತಿತರರಿದ್ದರು.
ಮಂಡ್ಯ ವಿವಿ ಮುಚ್ಚಲು ಹುನ್ನಾರ
ಹಿಂದೆ ಬಿಜೆಪಿ ಸರ್ಕಾರ 12ನೇ ಹಣಕಾಸು ಆಯೋಗದಂತೆ ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದು, ಪ್ರತಿ ವರ್ಷ 2 ಕೋಟಿ ರೂ. ಅನುದಾನ ನೀಡಬೇಕಾಗಿತ್ತು. ಅನುದಾನ ನೀಡಿದ್ದರೆ ವಿವಿ ಸುಗಮವಾಗಿ ನಡೆಯುತ್ತಿತ್ತು. ವಿವಿ ರಚನೆ ಮಾಡುವಾಗ ಸುಮ್ಮನಿದ್ದು, ಈಗ ವಿವಿ ಮುಚ್ಚಿ ಎನ್ನುವುದು ಸರಿಯಲ್ಲ ಎಂದು ಡಾ.ಬಿ.ಜಯಪ್ರಕಾಶಗೌಡ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡರು ವಿವಿಯಲ್ಲಿ ಅಕ್ರಮ ನಡೆದಿದೆ ಎಂದು ಹೇಳುತ್ತಾರೆ. ಆದರೆ ಅವರದೇ ಸರ್ಕಾರವಿದೆ. ಸಚಿವರು, ಶಾಸಕರ ಮೂಲಕ ಹೋರಾಟ ಮಾಡುವ ಮೂಲಕ ವಿವಿ ಉಳಿಸಬೇಕು. ಇದು ಜಿಲ್ಲೆಯ ಆಸ್ಮಿತೆಯಾಗಿದೆ. ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ವಿವಿ ಪರವಾಗಿದ್ದಾರೆ. ವಿವಿ ಮುಚ್ಚಿದರೆ ಬೆಂಕಿ ಹಚ್ಚುತ್ತೇವೆ ಎನ್ನುತ್ತಾರೆ. ಅತ್ತ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ವಿವಿ ಮುಚ್ಚುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎನ್ನುತ್ತಾರೆ. ಇತ್ತ ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ ಅವರು ಎಸ್.ಎಂ.ಕೃಷ್ಣ ಪೀಠ ರಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ವಿವಿ ಮುಚ್ಚುವ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ವಿವಿ ಮುಚ್ಚಿದರೆ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗಲಿದೆ. ಪ್ರಾರಂಭಿಸಿದಾಗಲೇ ಬೇಡ ಎನ್ನಬೇಕಿತ್ತು. ಈಗ ಏಳು ವರ್ಷದ ನಂತರ ಬೇಡ ಎನ್ನುವುದು ಜಿಲ್ಲೆಗೆ ಅವಮಾನ ಮಾಡಿದಂತಾಗುತ್ತದೆ. ಯಾವುದೇ ಕಾರಣಕ್ಕೂ ವಿವಿ ಮುಚ್ಚಲು ಬಿಡಬಾರದು. ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅಗತ್ಯವಾಗಿದೆ ಎಂದರು.
23ರಂದು ಮತ್ತೊಂದು ಸಭೆ
ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಮಾತನಾಡಿ, ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳ ಚರ್ಚೆ ನಡೆಸಲು ಪಕ್ಷಾತೀತವಾಗಿ ಸಭೆ ಕರೆಯಲು ನಿರ್ಧರಿಸಲಾಗಿದೆ. ಅದರಂತೆ ಮೇ 23ರಂದು ಮಧ್ಯಾಹ್ನ 12ಕ್ಕೆ ಸಭೆ ನಿಗದಿಪಡಿಸಲಾಗಿದ್ದು, ಅಂದಿನ ಸಭೆಗೆ ರಾಜಕೀಯ ಮುಖಂಡರು, ಸಾಹಿತ್ಯಾಸಕ್ತರು, ಶಿಕ್ಷಣ ತಜ್ಞರು, ರೈತಸಂಘಗಳ ಮುಖಂಡರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ಭಾಗವಹಿಸಬೇಕು. ಜಿಲ್ಲೆಯ ಅಭಿವೃದ್ಧಿ, ಪ್ರವಾಸೋದ್ಯಮ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುವುದು. ಆದ್ದರಿಂದ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.