ಅನಧಿಕೃತ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗಿಲ್ಲ ಅವಕಾಶ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೋಂದಣಿ ಪ್ರಮಾಣಪತ್ರ ನೀಡಲು ಸಭೆ
ಮಂಡ್ಯ: ಅನುಮತಿ ಹಾಗೂ ಅಗತ್ಯ ಕಟ್ಟಡ ಪರವಾನಗಿ ಪಡೆಯದೆ ನಿರ್ಮಿಸಿರುವ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ನಡೆಸಲು ಕಾನೂನುಬದ್ಧ ಪರವಾನಗಿ ನೀಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟಪಡಿಸಿದರು.
ಪ್ರವಾಸೋದ್ಯಮ ಇಲಾಖೆಗೆ ಹೊಸದಾಗಿ ಸ್ವೀಕರಿಸಿರುವ ಹೋಂ ಸ್ಟೇ ಘಟಕಗಳಿಗೆ ನೋಂದಣಿ ಪ್ರಮಾಣಪತ್ರ ನೀಡುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಣಿಜ್ಯ ಚಟುವಟಿಕೆ ನಡೆಸಲು ಉದ್ದೇಶಿಸುವವರು ಸಂಬಂಧಿಸಿದ ಇಲಾಖೆಯಿಂದ ಅಗತ್ಯ ಅನುಮತಿ ಹಾಗೂ ಕಟ್ಟಡ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘಿಸಿ ವಾಣಿಜ್ಯ ಚಟುವಟಿಕೆ ನಡೆಸಿದಲ್ಲಿ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಭೂ ಪರಿವರ್ತನೆ ಕಡ್ಡಾಯವಾಗಿದ್ದು, ಭೂ ಬಳಕೆಗೆ ಸಂಬಂಧಿಸಿದ ಅಗತ್ಯ ಅನುಮತಿಗಳನ್ನು ಪಡೆದು ನಿಯಮಾನುಸಾರ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವೇ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಅಥವಾ ಇತರೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ನಿರ್ಮಿಸಲಾಗುವ ಕಟ್ಟಡಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಕಾನೂನುಬಾಹಿರವಾಗಿದೆ. ಕೃಷಿ ಚಟುವಟಿಕೆಗೆ ಪೂರಕವಾಗಿ ನಿಯಮಾನುಸಾರ ನಿರ್ಮಿಸುವ ಫಾರ್ಮ್‌ಹೌಸ್‌ಗೆ ನಿಗದಿತ ನಿಯಮಗಳಡಿ ಅವಕಾಶವಿದ್ದರೂ, ಕೃಷಿ ಚಟುವಟಿಕೆಯ ಹೆಸರಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸುವುದು ಅಥವಾ ನಿವೇಶನ ಅಭಿವೃದ್ಧಿಪಡಿಸುವುದನ್ನು ಅನುಮತಿಸಲಾಗುವುದಿಲ್ಲ ಎಂದರು.
ಫಾರ್ಮ್‌ಹೌಸ್‌ಗಳನ್ನು ಕೃಷಿ ಚಟುವಟಿಕೆಗೆ ಪೂರಕವಾದ ನಿವಾಸ ಅಥವಾ ಕೃಷಿ ಕಾರ್ಯಗಳಿಗೆ ಅಗತ್ಯವಿರುವ ಕಟ್ಟಡವಾಗಿ ಮಾತ್ರ ಬಳಸಬೇಕು. ಅವುಗಳನ್ನು ವಾಣಿಜ್ಯ ಚಟುವಟಿಕೆ, ನಿವೇಶನ ಅಭಿವೃದ್ಧಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಸಬಾರದು. ಅನಧಿಕೃತ ಕಟ್ಟಡ ನಿರ್ಮಾಣ ಹಾಗೂ ಕೃಷಿ ಭೂಮಿಯ ನಿಯಮಬಾಹಿರ ಬಳಕೆಗೆ ಅವಕಾಶ ನೀಡದಂತೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಸೇರಿದಂತೆ ಹೋಂ ಸ್ಟೇ ಮಾಲೀಕರು, ಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net