ಅಪ್ರಾಪ್ತೆಯರಿಗೆ ಸ್ಕ್ಯಾನಿಂಗ್ ಪರಿಶೀಲನೆಗೆ ಸೂಚನೆ: ಲೋಕಾಯುಕ್ತ ಪೊಲೀಸರ ದಾಳಿ ಬೆನ್ನಲ್ಲೇ ಕ್ರಮ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಕುಮಾರ ನೇತೃತ್ವದಲ್ಲಿ ಮಹತ್ವದ ಸಭೆ
  • ಆರೋಗ್ಯ ಇಲಾಖೆಯಿಂದ ಆಯೋಜನೆ
ಮಂಡ್ಯ: ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದ ವೇಳೆ ಹಲವು ಲೋಪಗಳು ಬೆಳಕಿಗೆ ಬಂದಿದ್ದವು. ಮಾತ್ರವಲ್ಲದೆ ಅಪ್ರಾಪ್ತೆಯರಿಗೆ ಸ್ಕ್ಯಾನಿಂಗ್ ಮಾಡಿರುವ ಸಂಬಂಧ ಪೊಲೀಸರು ಹಾಗೂ ಸಂಬಂಧಿಸಿದ ಪ್ರಾಧಿಕಾರಕ್ಕೆ ಮಾಹಿತಿಯನ್ನೇ ನೀಡದೇ ಮುಚ್ಚಿಟ್ಟಿದ್ದು ಬಯಲಾಗಿತ್ತು. ಇದರ ಬೆನ್ನಲ್ಲೇ ಜಿಲ್ಲೆಯ ಎಲ್ಲ ಸ್ಕಾೃನಿಂಗ್ ಸೆಂಟರ್‌ಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಸೂಚನೆ ಮೇರೆಗೆ ಕಳೆದ ವಾರ ಲೋಕಾಯುಕ್ತ ಪೊಲೀಸರು ಕೆ.ಆರ್.ಪೇಟೆ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್ ಹಾಗೂ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವು ನ್ಯೂನ್ಯತೆ ಕಂಡುಬಂದಿತ್ತು. ಈ ಸಂಬಂಧ ವರದಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಕ್ಯಾನಿಂಗ್ ಸೆಂಟರ್‌ಗಳ ಬಗ್ಗೆ ದೂರು ಸಂಬಂಧ ಅಧಿಕಾರಿಗಳು ಕ್ರಮ ವಹಿಸಬೇಕು. ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಸ್ಕಾೃನಿಂಗ್ ಸೆಂಟರ್‌ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಲು ಸಮಿತಿ ರಚನೆ ಮಾಡಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಪರಿಶೀಲನೆಯಲ್ಲಿ ಸೆಂಟರ್‌ಗಳಲ್ಲಿ ನಿಯಮನುಸಾರವಾಗಿ ಸ್ಕಾೃನಿಂಗ್ ವಿವರಗಳನ್ನು ನಮೂದಿಸಿಲ್ಲದರ ಬಗ್ಗೆ ವರದಿಯಾಗಿದೆ. ಈ ಸಂಬಂಧ ಎಲ್ಲ ಅಧಿಕಾರಿಗಳೊಂದಿಗೆ ಜಿಲ್ಲಾ ಸಮಿತಿಯನ್ನು ಕರೆದು ಸಭೆಯನ್ನು ನಡೆಸಲಾಗಿದೆ. ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ನಿಷೇಧ ಕಾಯ್ದೆ ಪ್ರಕಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಲೋಕಾಯುಕ್ತ ಪೊಲೀಸರು ಪ್ರಕರಣವನ್ನು ದಾಖಲು ಮಾಡಿರುವ ಬಗ್ಗೆ ಎಲ್ಲ ವಿವರಗಳನ್ನು ಇಲಾಖೆಯಿಂದ ಸಮರ್ಪಕವಾಗಿ ನೀಡಿದ್ದಾರೆ. ತಪ್ಪು ಎಸಗಿರುವ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಕೂಡಲೇ ನಿಯಮಾನುಸಾರ ಕ್ರಮವನ್ನು ಜರುಗಿಸಬೇಕು. ಅಪ್ರಾಪ್ತ ಗರ್ಭಿಣಿಯರಿಗೆ ನಿಯಮ ಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವ ಮಾಹಿತಿಯನ್ನು ಸಮರ್ಪಕವಾಗಿ ಸಂಬಂಧಪಟ್ಟಂತಹ ಇಲಾಖೆಗೆ ವರದಿ ಸಲ್ಲಿಸದ್ದು, ಅಂತಹ ಸೆಂಟರ್ ವಿರುದ್ಧ ಸೂಕ್ತ ಪ್ರಕರಣ ದಾಖಲು ಮಾಡಬೇಕು. ಮಾತ್ರವಲ್ಲದೆ ಸೆಂಟರ್ ಪರವಾನಗಿ ರದ್ದುಪಡಿಸಬೇಕು. ಜತೆಗೆ ಸೆಂಟರ್ ಬಾಗಿಲು ಮುಚ್ಚಲು ಕ್ರಮ ವಹಿಸುವಂತೆ ಸೂಚಿಸಿದರು.
ಸ್ಕ್ಯಾನಿಂಗ್ ಅಕ್ರಮ ತಡೆಯುವ ಸಂಬಂಧ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಸಂಪೂರ್ಣ ಜವಾಬ್ದಾರಿ ತಾಲೂಕು ಆರೋಗ್ಯಾಧಿಕಾರಿ ತೆಗೆದುಕೊಂಡು ಮುಂದಿನ ಹತ್ತು ದಿವಸದ ಒಳಗಡೆ ಜಿಲ್ಲೆಯಲ್ಲಿರುವ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಜಾಗೃತ ದಳದವರು ಪರಿಶೀಲನೆ ನಡೆಸಿದ ಬಗ್ಗೆ ಕಳೆದ ಆರು ತಿಂಗಳ ಎಫ್‌ಆರ್ ಫಾರಂ ಅನ್ನು ಪಡೆದು ಆಡಿಟ್ ಮಾಡಿಸಬೇಕು. ಮತ್ತು ನಿಯಮಾನುಸಾರ ನಿಗದಿ ನಮೂನೆಯಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
18 ವರ್ಷದೊಳಗಿನ ಅಪ್ರಾಪ್ತ ಹೆಣ್ಣು ಮಕ್ಕಳ ಸ್ಕ್ಯಾನಿಂಗ್ ಗೆ ಸಂಬಂಧಪಟ್ಟಂತೆ ಅಂತಹ ಪ್ರಕರಣಗಳಿದ್ದಲ್ಲಿ ಪೋಕ್ಸೋ ಕಾಯ್ದೆ ಪ್ರಕಾರ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಮಾಡಬೇಕು. ಈ ನಿಟ್ಟಿನಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಸ್ಕಾೃನಿಂಗ್ ಸೆಂಟರ್ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮಾತ್ರವಲ್ಲದೆ ಕೂಡಲೇ ಪ್ರಕರಣ ದಾಖಲು ಮಾಡಲು ಕ್ರಮ ವಹಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.
ಇದಲ್ಲದೆ ಜಿಲ್ಲೆಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗೆ ಸಂಬಂಧಪಟ್ಟಂತೆ ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಪ್ರಕಾರ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣೆ ಮಾಡಿ ಅದಕ್ಕೆ ಸಂಬಂಧಿಸಿದಂತೆ ಮಾಸಿಕ ವರದಿಯನ್ನು ಸಲ್ಲಿಸಬೇಕು. ಹಾಗೂ ಭ್ರೂಣ ಲಿಂಗ ಪತ್ತೆಯು ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಚಟುವಟಿಕೆ ಮಾಡಬೇಕು. ಜತೆಗೆ ಆಸ್ಪತ್ರೆ, ಖಾಸಗಿ ಕ್ಲಿನಿಕ್, ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗದಿತ ನಮೂನೆಯಲ್ಲಿ ವರದಿಯನ್ನು ಸಲ್ಲಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬೆಟ್ಟಸ್ವಾಮಿ, ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಕಾಂತರಾಜು, ಡಾ.ಕೆ.ಪಿ.ಅಶ್ವಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net