ಎರಡು ದಿನದಲ್ಲಿ ಖಾತೆಗೆ ಹಣ ಜಮೆ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಹೇಳಿಕೆ

ಮಂಡ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
ಮಂಡ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ
  • ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜನೆ
ಮಂಡ್ಯ: ಗೃಹಲಕ್ಷ್ಮೀ ಯೋಜನೆಯಡಿ ಫೆಬ್ರವರಿವರಿಗೆ ಫಲಾನುಭವಿ ಖಾತೆಗೆ ಹಣವನ್ನು ಪಾವತಿಸಲಾಗಿದೆ. ಅಂತೆಯೇ ಮಾರ್ಚ್ ತಿಂಗಳ ಹಣ ಪಾವತಿಗಾಗಿ ಖಜಾನೆಗೆ ಬಿಲ್ ಸಲ್ಲಿಸಲಾಗಿದೆ. ಮುಂದಿನ ಎರಡು ದಿನದಲ್ಲಿ ಫಲಾನುಭವಿಗಳ ಖಾತೆಗೆ ಪಾವತಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿ ಅಕ್ಕಿ ಪಡೆದು ನಂತರ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ಕ್ರಮ ವಹಿಸಬೇಕು. ಜತೆಗೆ ಈ ರೀತಿ ಮಾರಾಟ ಮಾಡುವುದು ಕಾನೂನು ಅಪರಾಧ ಎಂಬ ಬಗ್ಗೆ ಅರಿವು ಮೂಡಿಸಬೇಕು. ಈ ಸಂಬಂಧ ಕಾನೂನು ಬಗ್ಗೆ ಮಾಹಿತಿಯನ್ನು ನಾಮಫಲಕಗಳಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ 2025ರ ಫೆಬ್ರವರಿಯಿಂದ 2026ರ ಏಪ್ರಿಲ್ರವರೆಗೆ 10,75,910 ಕ್ವಿಂಟಾಲ್ ಅಕ್ಕಿಯನ್ನು ಹಂಚಿಕೆ ಮಾಡಲಾಗುತ್ತಿದೆ. ಅಕ್ಕಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿ ಫಲನುಭವಿಗಳಿಗೆ ವಿತರಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಪ್ರಾಧಿಕಾರದ ಉಪಾಧ್ಯಕ್ಷ ಕೆ.ಹನುಮಂತಯ್ಯ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಎ.ಪಿ.ಎಲ್ನಿಂದ ಬಿ.ಪಿ.ಎಲ್ಗೆ ಪರಿವರ್ತಿಸಲು ಜಿಲ್ಲೆಯಲ್ಲಿ ಒಟ್ಟು 718 ಪಡಿತರ ಅರ್ಜಿ ಬಂದಿದೆ. ಎಪಿಎಲ್ನಿಂದ ಬಿಪಿಎಲ್ ಗೆ 437 ಪಡಿತರ ಚೀಟಿಯನ್ನು ಪರಿವರ್ತಿಸಲಾಗಿದೆ. ಹಾಗೂ 281 ಪಡಿತರ ಚೀಟಿಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಬಿಪಿಎಲ್ಗೆ ಪರಿವರ್ತಿಸಲಾಗುವುದು ಎಂದು ಹೇಳಿದರು.
ಪ್ರಾಧಿಕಾರದ ಮತ್ತೋರ್ವ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2025 ಜೂನ್‌ನಿಂದ 2026 ಏಪ್ರಿಲ್ರವರೆಗೆ ಒಟ್ಟು 21,01,53,013 ಮಹಿಳೆಯರು ಪ್ರಯಾಣಿಸಿದ್ದಾರೆ. ಅಂತೆಯೇ 583,44,74,314 ರೂ ಸಾರಿಗೆ ಇಲಾಖೆಗೆ ಆದಾಯವಾಗಿದೆ. ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ವಾಹನ ಚಾಲಕರು ಹಾಗೂ ನಿರ್ವಾಹಕರು ಬಸ್‌ನಲ್ಲಿ ಪ್ರಯಾಣಿಸುವವರನ್ನು ಅತ್ಯಂತ ಸೌಜನ್ಯದಿಂದ ಮಾತನಾಡಿಸಿ ವರ್ತಿಸುವ ಬಗ್ಗೆ ತಿಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಯುವನಿಧಿ ಯೋಜನೆ ಕುರಿತು ಎಲ್ಲ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಯೋಜನೆ ಕುರಿತು ಅರಿವು ಕಾರ್ಯಕ್ರಮ ಮಾಡಬೇಕು. ಯೋಜನೆ ಕುರಿತು ಶಾಲಾ ಕಾಲೇಜು ಸುತ್ತಮುತ್ತ ನಾಮಫಲಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುಷ್, ಜಿಲ್ಲಾ ಉದ್ಯೋಗಾಧಿಕಾರಿ ನವೀನ್‌ಕುಮಾರ್ ಸೇರಿದಂತೆ ಪ್ರಾಧಿಕಾರದ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net