ಅಸ್ಪೃಶ್ಯತೆಯಿಂದ ಜಿಲ್ಲೆಯನ್ನು ಮುಕ್ತಗೊಳಿಸಿ: ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ
  • ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಮಂಡ್ಯ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು. ಮತ್ತು ದೌರ್ಜನ್ಯ ಪ್ರಕರಣ ಮತ್ತು ಅಸ್ಪೃಶ್ಯತೆ ಆಚರಣೆಯ ಸಾಮಾಜಿಕ ಧೋರಣೆಯನ್ನು ತೊಲಗಿಸಬೇಕು ಎಂದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಎಲ್.ಮೂರ್ತಿ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 46 ರಿಂದ 47 ದೌರ್ಜನ್ಯ ಪ್ರಕರಣ ಆಯೋಗದಲ್ಲಿ ದಾಖಲಾಗಿವೆ. ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಂಭೀರ ತೊಡಕುಗಳನ್ನು ಬಗೆಹರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಮತ್ತು ನಗರಸಭೆಯ ಗಂಭೀರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಪರಿಶೀಲಿಸಬೇಕು. ಎಂದು ಹೇಳಿದರು.
ರಾಜ್ಯದಲ್ಲಿ 10 ಜಿಲ್ಲೆಗಳ ಪ್ರವಾಸ ಮಾಡಿ ಅಧಿಕಾರಿಗಳ ಜತೆ ಸಭೆ ನಡೆಸಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಕಟ್ಟುನಿಟ್ಟಾದ ಕ್ರಮವಹಿಸುವಂತೆ ಸೂಚಿಸಲಾಗಿದೆ. ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದನೆ ಬಹಳ ಮುಖ್ಯ. ಜಿಲ್ಲೆಯು ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಶ್ರದ್ದೆ ವಹಿಸಿ ಕೆಲಸ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ವಾಸಿಸಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಪರಿಹರಿಸಬೇಕು. ಜಿಲ್ಲೆಯಲ್ಲಿ ಜಮೀನು ವಿಚಾರವಾಗಿ ದಾರಿ, ಸ್ಮಶಾನ, ಸರ್ವೇ, ದುರಸ್ತಿ ಪ್ರಕರಣಗಳನ್ನು ಶೀಘ್ರವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಮಾ.7ರಂದು ಜಿಲ್ಲಾಡಳಿತ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಅಸ್ಪೃಶ್ಯತಾ ನಿವಾರಣಾ ಕಾಯ್ದೆಯ ಅರಿವು ಕಾರ್ಯಾಗಾರವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಸಮಾಜದ ಎಲ್ಲ ವರ್ಗದವರು ಮತ್ತು ಮುಖಂಡರು ಭಾಗವಹಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಸ್ಪೃಶ್ಯತೆ ಆಚರಣೆ ಸಮಾಜಕ್ಕೆ ಕಳಂಕ. ಎಲ್ಲ ಮುಖಂಡರು ಮತ್ತು ಸಾರ್ವಜನಿಕರು ಅಸ್ಪೃಶ್ಯತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಎಲ್ಲರೂ ಕಾರ್ಯಕ್ರಮದ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಾ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು. ಇದೇ ವೇಳೆ ಆಯೋಗದ ಅಧ್ಯಕ್ಷರು ಸಾರ್ವಜನಿಕರು ಮತ್ತು ಸಂಘಟನೆಗಳ ಅಹವಾಲು ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net